ADVERTISEMENT

ಯುಪಿಸಿಎಲ್ ಘಟಕ-2 ತೂಗುಯ್ಯಾಲೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 10:25 IST
Last Updated 16 ಮಾರ್ಚ್ 2012, 10:25 IST

ಉಡುಪಿ: ನಂದಿಕೂರಿನ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ಯುಪಿಸಿಎಲ್‌ನಲ್ಲಿ ಪರಿಸರ ಮಾಲಿನ್ಯದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು 2 ತಿಂಗಳು ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಸರಿಪಡಿಸದೇ ಇದ್ದಲ್ಲಿ ಜೂನ್ ಎರಡನೇ ವಾರದಲ್ಲಿ ಉದ್ದೇಶಿತ 2ನೇ ಘಟಕದ ಕಾರ್ಯರಂಭಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ~ ಎಂದು ಇಂಧನ ಸಚಿವ ಶೋಭಾ ಕರಂದ್ಲಾಜೆ ಇಲ್ಲಿ ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಗುರುವಾರ ಮತಯಾಚನೆ ಸಲುವಾಗಿ ಆಗಮಿಸಿದ್ದ ಅವರು ಕಡಿಯಾಳಿಯಲ್ಲಿ ಪಕ್ಷದ ಕಚೇರಿಯಲ್ಲಿ ಮಾತನಾಡಿದರು.
`ಮೊದಲ ಘಟಕದಿಂದ ಆಗಿರುವ ತೊಂದರೆಯ ಕುರಿತು ತಜ್ಞರ ವರದಿ ಬಂದಿದೆ.
 
ಜತೆಗೆ ಕೇಂದ್ರದ ಎನ್‌ಟಿಪಿಸಿಯಿಂದಲೂ ಪರಿಶೀಲಿಸಿ ವರದಿ ಪಡೆಯಲಾಗಿದೆ. ಮೇಲ್ನೋಟಕ್ಕೆ ಕಂಡು ಬಂದಂತೆ ಪರಿಸರಕ್ಕೆ ಹಾನಿ ಉಂಟುಮಾಡುವ ಕೆಲವು ಘಟನೆಗಳು ಈ ಪ್ರದೇಶದಲ್ಲಿ ನಡೆದಿದ್ದು, ಅವುಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಂಪೆನಿ 2 ತಿಂಗಳ ಕಾಲಾವಕಾಶವನ್ನು ಕೇಳಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾನುಸಾರ ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಮಾತ್ರವೇ  2ನೇ ಘಟಕ ಪ್ರಾರಂಭಿಸಲು ಅವಕಾಶ ನೀಡುತ್ತೇವೆ. ಪರಿಸರ ಮಾಲಿನ್ಯದೊಂದಿಗೆ ರಾಜೀ ಪ್ರಶ್ನೆಯೇ ಇಲ್ಲ~ ಎಂದು ಸ್ಪಷ್ಟಪಡಿಸಿದರು.

`ಯುಪಿಸಿಎಲ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತ್ ಸಾಗಿಸಲು ಅಗತ್ಯವಾದ ಮಾರ್ಗಗಳು ಸಿದ್ಧಗೊಳ್ಳುವ ಮುನ್ನವೇ 2ನೇ ಘಟಕ ಪ್ರಾರಂಭಿಸುವ ಉದ್ದೇಶವೇನು?~ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `400 ಕೆವಿ ವಿದ್ಯುತ್ ಲೈನ್‌ಗಳನ್ನು ಪಶ್ಚಿಮ ಘಟ್ಟದಲ್ಲಿ ಹಾಕಲು ಸುಪ್ರಿಂ ಕೋರ್ಟ್‌ನ ಹಸಿರು ಪೀಠ ಅವಕಾಶ ನೀಡಿದೆ. ಸುಮಾರು 8.3 ಕಿ.ಮೀ ದೂರದಷ್ಟು ಮಾತ್ರ ಮರಗಳನ್ನು ಕಡಿಯಬೇಕಾಗಿರುವ ಪ್ರದೇಶವಿದೆ. ಅದರ ಸಮಸ್ಯೆ ನಿವಾರಣೆಯಾಗುತ್ತಿದೆ~ ಎಂದರು.

ಯುಪಿಸಿಎಲ್‌ನಲ್ಲಿ ಹಲವು ಸಮಸ್ಯೆಗಳಿದ್ದರೂ ಸ್ಥಳಕ್ಕೇ ಭೇಟಿ ನೀಡದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, `ಯುಪಿಸಿಎಲ್‌ಗೆ ಭೇಟಿ ನೀಡುವ ಉದ್ದೇಶವಿತ್ತು. ಆದರೆ ಹಿರಿಯ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯರೇ ಇಲ್ಲಿನ ಸಮಸ್ಯೆ ನಿವಾರಣೆ ನೋಡಿಕೊಂಡಿದ್ದರಿಂದ ಬಂದಿಲ್ಲ. ಚುನಾವಣೆ ಮುಗಿದ ಬಳಿಕ ಮುಂದಿನ ತಿಂಗಳು ಮಾಧ್ಯಮದವರನ್ನು ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡುತ್ತೇನೆ~ ಎಂದು ಸಚಿವೆ ತಿಳಿಸಿದರು.

2,200 ಮೆ.ವಾ. ವಿದ್ಯುತ್ ಉತ್ಪಾದನೆ: `ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 1 ಮೆ.ವಾ.ಕೂಡ ವಿದ್ಯುತ್ ಉತ್ಪಾದನೆ ಮಾಡಿಲ್ಲ~ ಎನ್ನುವ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, `ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರಾಜ್ಯದಲ್ಲಿ ಒಟ್ಟು 2,200 ಮೆ.ವಾ. ವಿದ್ಯುತ್ ಉತ್ಪಾದಿಸಲಾಗಿದೆ~ ಎಂದರು.

`ಸುಮಾರು 12, ಸಾವಿರ ಮೆ.ವಾ. ಪವನ ವಿದ್ಯುತ್ ಉತ್ಪಾದಿಸುವ ಗುರಿಯಿದ್ದು, ಅವುಗಳಲ್ಲಿ  ಈಗ 1250 ಮೆ.ವಾ. ಪವನ ವಿದ್ಯುತ್ ದೊರಕುತ್ತಿದೆ. ಪರಿಸರಕ್ಕೆ ಮಾರಕವಲ್ಲದ ಸಣ್ಣಪುಟ್ಟ ಜಲವಿದ್ಯುತ್ ಯೋಜನೆ ಹಲವು ಕಡೆಗಳಲ್ಲಿ ನಡೆಯುತ್ತಿದೆ. ಸೌರ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಿದ್ದು, 2014ರೊಳಗೆ 200 ಮೆ.ವಾ. ವಿದ್ಯುತ್ ಉತ್ಪಾದನೆಯಾಗಲಿದೆ. ಈ ವರ್ಷ 100 ಮೆ.ವಾ. ವಿದ್ಯುತ್ ಸಿಗಲಿದೆ. ಬಳ್ಳಾರಿ, ಬೆಳಗಾವಿ, ಕೋಲಾರ ಮತ್ತಿರರ ಕಡೆಗಳಲ್ಲಿ ಲಭ್ಯವಾಗುತ್ತಿದೆ. ಅನೇಕ ಕಡೆ  ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ. ಕೊಡ್ಗಿ ಜಲವಿದ್ಯುತ್ ಯೋಜನೆ ಮುಂದಿನ ವರ್ಷ ಪ್ರಾರಂಭವಾಗಲಿದೆ. ಇನ್ನು ಕೆಲವೆಡೆಗಳಲ್ಲಿ ಅಗತ್ಯವಾದ ಕಲ್ಲಿದ್ದಲು ದೊರಕದೇ ಇದ್ದ ಕಾರಣ ವಿದ್ಯುತ್ ಉತ್ಪಾದನೆಯಲ್ಲಿ ತೊಂದರೆಯಾಗಿತ್ತು~ ಎಂದರು.

`ಕೇಂದ್ರ ಸರ್ಕಾರವೇ ಅನುಮತಿ ನೀಡಿದರೂ ಹಲವು ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಸಕ್ತಿವಹಿಸುತ್ತಿಲ್ಲ~ ಎಂಬ ವಿರೋಧ ಪಕ್ಷಗಳ ಟೀಕೆಯ ಬಗ್ಗೆ ಉತ್ತರಿಸಿದ ಅವರು, `ಸಂಬಂಧಪಟ್ಟ ಅಧಿಕಾರಿಗಳೊಂದಿಗೆ 4-6 ಬಾರಿ ಹಲವು ವಿದ್ಯುತ್ ಯೋಜನೆಗಳ ಬಗ್ಗೆ ಚರ್ಚಿಸಲು ಕೇಂದ್ರಕ್ಕೆ ಹೋಗಿ ಮಾತುಕತೆ ನಡೆಸಿದ್ದೇನೆ. ಕೇಂದ್ರ ಸಚಿವರಿಗೆ ಕೂಡ ಮನವಿ ಮಾಡಿಕೊಂಡಿದ್ದೇನೆ. ಆದರೆ ರಾಜ್ಯದ ಹಲವು ಯೋಜನೆಗಳಿಗೆ ಕೇಂದ್ರವೇ ಆದ್ಯತೆ ನೀಡಿಲ್ಲ. ಕಲ್ಲಿದ್ದಲು ಕೊರತೆಯಿಂದಾಗಿ ಕೆಲವೆಡೆ ಸಮಸ್ಯೆಯಾಗಿದೆ ~ ಎಂದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್ ಹಾಗೂ ಶ್ಯಾಮಲಾ ಕುಂದರ್ ಇದ್ದರು.

`ಮೊದಲ ಘಟಕದಿಂದ ಆಗಿರುವ ತೊಂದರೆಯ ಕುರಿತು ತಜ್ಞರ ವರದಿ ಬಂದಿದೆ. ಜತೆಗೆ ಕೇಂದ್ರದ ಎನ್‌ಟಿಪಿಸಿಯಿಂದಲೂ ಪರಿಶೀಲಿಸಿ ವರದಿ ಪಡೆಯಲಾಗಿದೆ. ಮೇಲ್ನೋಟಕ್ಕೆ ಕಂಡು ಬಂದಂತೆ ಪರಿಸರಕ್ಕೆ ಹಾನಿ ಉಂಟುಮಾಡುವ ಕೆಲವು ಘಟನೆಗಳು ಈ ಪ್ರದೇಶದಲ್ಲಿ ನಡೆದಿದ್ದು, ಅವುಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಂಪೆನಿ 2 ತಿಂಗಳ ಕಾಲಾವಕಾಶವನ್ನು ಕೇಳಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾನುಸಾರ ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಮಾತ್ರವೇ  2ನೇ ಘಟಕ ಪ್ರಾರಂಭಿಸಲು ಅವಕಾಶ ನೀಡುತ್ತೇವೆ. ಪರಿಸರ ಮಾಲಿನ್ಯದೊಂದಿಗೆ ರಾಜೀ ಪ್ರಶ್ನೆಯೇ ಇಲ್ಲ~

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.