ADVERTISEMENT

ರಂಗರಸಿಕರಿಗೆ ಆಪ್ತವಾದ ಅಂತರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:00 IST
Last Updated 20 ಅಕ್ಟೋಬರ್ 2012, 4:00 IST
ರಂಗರಸಿಕರಿಗೆ ಆಪ್ತವಾದ ಅಂತರ
ರಂಗರಸಿಕರಿಗೆ ಆಪ್ತವಾದ ಅಂತರ   

ರಂಗದ ಮೇಲೆ ಮನೆಯ ದೃಶ್ಯ. ಗೋಡೆಯಲ್ಲಿ 1990ರ ಇಸವಿ ತೂಗುಹಾಕಿದ ಕ್ಯಾಲೆಂಡರ್. ಅಂದರೆ ಮೊಬೈಲ್ ಎಂಬ ಪದವನ್ನೇ ಕೇಳದಿದ್ದ ಮತ್ತು ದಿಢೀರ್ ಎಂದು ವಿದೇಶಕ್ಕೆ ಹೋಗುವುದೂ ಕಷ್ಟಸಾಧ್ಯವಾಗಿದ್ದ ಕಾಲ ಘಟ್ಟವದು. ಆಧುನಿಕ ಜೀವನದ ಮುಖವಾಡ ಧರಿಸಿ, ಒಳಗಿನ ಕಟುಸತ್ಯವನ್ನು ಹೊರಹಾಕಲಾಗದೆ ಅನುಭವಿಸುತ್ತಿರುವ ಒಂದು ಸಂಸಾರದ ಕಥೆ ಅಲ್ಲಿ ತೆರೆದುಕೊಳ್ಳುತ್ತದೆ.

ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದ ಭುಜಂಗನಿಗೆ ತನ್ನ ಮತ್ತು ಹೆಂಡತಿಯ ತಾರುಣ್ಯ, ಬೆಳೆಯುತ್ತಿರುವ ಎಳೆಯ ಮಕ್ಕಳ ಆಟ ಪಾಠ, ಬದುಕಿನ ಮಧುರ ಕ್ಷಣಗಳನ್ನು ಕಳೆಯುವ ಆಸೆ ಮನದಲ್ಲಿ ಅವಿತಿರುತ್ತದೆ. ಆದರೂ, ಅಲ್ಲಿನ ಕೆಲಸದ ಒತ್ತಡಗಳು ಆತನನ್ನು ಇವೆಲ್ಲವುಗಳಿಂದ ವಿಮುಖನನ್ನಾಗಿಸುತ್ತವೆ. ಇದರಿಂದ ಬೇಸತ್ತು, ಉದ್ಯೋಗವನ್ನೇ ತ್ಯಜಿಸಿ, ಮನದಾಳದಲ್ಲಿ ಹೊಸೆದಿದ್ದ ಅದೇ ಹಿಂದಿನ ಕನಸುಗಳನ್ನು ಹೊತ್ತು ಊರಿಗೆ ಹಿಂದಿರುಗುತ್ತಾನೆ. ಆದರೆ, ಇಲ್ಲಿಯೂ ನಿರಾಸೆಗಳೇ ಆತನನ್ನು ಸ್ವಾಗತಿಸುತ್ತದೆ.

ಹೆಂಡತಿ ಮೀನಾಕ್ಷಿ ಒಂಟಿತನ ಮರೆಯಲು, ಅನಾಥ ಮಕ್ಕಳ ಸೇವಾ ಸಂಸ್ಥೆಯಲ್ಲಿ ತೊಡಗಿಸಿಕೊಂಡು, ಅಲ್ಲಿನ ಚಟುವಟಿಕೆಯಲ್ಲೇ ಮಗ್ನಳಾಗಿರುತ್ತಾಳೆ.  ಬೆಳೆದು ನಿಂತ ಮಕ್ಕಳಾದ ಸ್ವಾತಿ ಮತ್ತು ಪ್ರತೀಕ ಸೂತ್ರ ಹರಿದ ಗಾಳಿಪಟದಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತಾರೆ.  ಅವರ ದೃಷ್ಟಿಯಲ್ಲಿ ನಗಣ್ಯನಾಗಿ ಪರಕೀಯನಾಗುವ ಮೂಲಕ ವೇದನೆ ಅನುಭವಿಸುವ ಭುಜಂಗನಿಗೆ ಇವೆಲ್ಲವುಗಳಿಂದ ಮುಕ್ತ ಬಯಸಿ ಪುನಃ ವಿದೇಶಕ್ಕೆ ಪ್ರಯಾಣ ಬೆಳೆಸಲು ನಿರ್ಧರಿಸುತ್ತಾನೆ.
 
ಆದರೆ ಊರಲ್ಲೇ ಇದ್ದು ಸುಖ ಸಂಸಾರ ನಡೆಸುತ್ತಿರುವ ಗೆಳೆಯನೊಬ್ಬ ಆತನನ್ನು ಊರಿನಲ್ಲೇ ಉಳಿಸಿಕೊಳ್ಳಲು ಮನವೊಲಿಸುವ ಪ್ರಯತ್ನ ಮಾಡುತ್ತಾನೆ. ಅಷ್ಟರಲ್ಲಿ ಪತ್ನಿ ಹಾಗೂ ಮಕ್ಕಳಿಗೂ ಮನಃಪರಿವರಿರ್ತನೆ ಆಗುತ್ತದೆ. ಅವರು ಕೂಡಾ ` ನೀವು ಇಲ್ಲೇ ಇರಿ, ನಮಗೆ ನೀವು ಬೇಕು~ ಎಂದು ಹಠ ಹಿಡಿದರೂ ಭುಜಂಗ ತನ್ನ ನಿರ್ಧಾರದಿಂದ ವಿಚಲಿತನಾಗಿ ಇಲ್ಲಿಯೇ ನೆಲೆಸುತ್ತಾನೋ, ಅಥವಾ ವಿದೇಶಕ್ಕೆ ತೆರಳುತ್ತಾನೋ ಎಂಬುದನ್ನು ರಂಗದಲ್ಲಿ ನೋಡಬೇಕು.

ಭುಜಂಗನಾಗಿ ರಾಘವೇಂದ್ರ ರಾವ್ ಕಟಪಾಡಿಯವರು ಅದ್ಭುತವಾಗಿ ಅಭಿನಯಿಸಿ ಎಲ್ಲರ ಮನಕಲಕುವಂತೆ ಮಾಡಿದ್ದಾರೆ. ಹಾಗೆಯೇ ಮೀನಾಕ್ಷಿಯಾಗಿ ಶಿಲ್ಪಾ ಜೋಶಿ, ಮಕ್ಕಳಾಗಿ ವೃಂದಾ ರಾವ್ ಮತ್ತು ಕೌಶಿಕ್ ರಾವ್, ಗೆಳೆಯನಾಗಿ ರಾಜೇಶ್ ಭಟ್, ಆತನ ಪತ್ನಿಯಾಗಿ ಪ್ರಭಾ ರೈ, ಮಗನಾಗಿ ನರಸಿಂಹ ಹೊಳ್ಳ ಬಹಳ ಸಹಜ ಅಭಿನಯದಿಂದ ಮನೋಭಿತ್ತಿಯಲ್ಲಿ ಅಚ್ಚೊತ್ತಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಜ್ಞಾ  ಮಾರ್ಪಳ್ಳಿಯವರ ಅಲೆಗಳು ಮತ್ತು ಕಾತ್ಯಾಯಿನಿ ಕುಂಜಿಬೆಟ್ಟು ಅವರ  `ಅಂತರ~  (ಮೂಲ: ಅಶೋಕ್ ಪಾಟೋಳೆಯವರ ಮರಾಠಿ ನಾಟಕ  ನೀ ಮಾ ಮುಲಾಂಚ) ನಾಟಕ ಕೃತಿ ಬಿಡುಗಡೆಯ ಸಮಾರಂಭದಂದು ಕಟಪಾಡಿ ರಂಜನಾ ಕಲಾವಿದರು ರಾಘವೇಂದ್ರ ರಾವ್ ನಿರ್ದೇಶನದಲ್ಲಿ ಅಂತರ ಕೃತಿಯನ್ನು ಆಡಿ ತೋರಿಸಿದರು. ಸಂಗೀತ ಸಂಯೋಜನೆ ಮತ್ತು ನಿರ್ವಹಣೆ ವಿದ್ವಾನ್ ರವಿಕಿರಣ್ ಮಣಿಪಾಲ, ಬೆಳಕು ಮತ್ತು ಮೇಕಪ್ ಯಜ್ಞೇಶ್ವರ ಆಚಾರ್ಯ ಉದ್ಯಾವರ, ರಂಗ ಪರಿಕರ ಕೃಷ್ಣಕುಮಾರ್ ರಾವ್ ಮಟ್ಟು ಅವರದು.

ನಾಟಕದ ಸಂಭಾಷಣೆಗಳು, ಸಂದರ್ಭೋಚಿತವಾದ ಹಾಡುಗಳ ಮೂಲಕ ನಮ್ಮ ಒಳಧ್ವನಿ ಎಚ್ಚೆತ್ತುಕೊಳ್ಳುವಂತೆ ಮಾಡುವಲ್ಲಿ ಕಾತ್ಯಾಯಿನಿಯವರು ಸಫಲರಾಗಿದ್ದಾರೆ. `ಅಂತರ~ ಪ್ರೇಕ್ಷಕರ ನಡುವೆ ಅಂತರ ಕಾಯ್ದುಕೊಳ್ಳದೆ ಆಪ್ತವಾಗಿ ಮೂಡಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.