ADVERTISEMENT

ರತ್ನತ್ರಯ ಕ್ಷೇತ್ರ ವೈಶಿಷ್ಟ್ಯಪೂರ್ಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 9:45 IST
Last Updated 17 ಮಾರ್ಚ್ 2012, 9:45 IST

ಬೆಳ್ತಂಗಡಿ: `ಇಲ್ಲಿನ ಜೈನಪೇಟೆಯ ರತ್ನತ್ರಯ ಕ್ಷೇತ್ರದಲ್ಲಿ ಮೂರು ಬಸದಿಗಳಿದ್ದು ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಐದು ಕಂಬಗಳ ಮೇಲೆ ಇರುವ ಬ್ರಹ್ಮಯಕ್ಷ ವಿಶಿಷ್ಟ ಕಲೆಯೊಂದಿಗೆ ವೈಶಿಷ್ಟ್ಯಪೂರ್ಣವಾಗಿದ್ದು ದೇಶದಲ್ಲೇ ಇದು ಪವಿತ್ರ ಕ್ಷೇತ್ರವಾಗಿದೆ~ ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಬೆಳ್ತಂಗಡಿಯ ರತ್ನತ್ರಯ ತೀರ್ಥಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜಾ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ಅವರು ಮಂಗಲ ಪ್ರವಚನ ನೀಡಿದರು.

ಕೆ.ಜಯವರ್ಮರಾಜ ಬಲ್ಲಾಳ್ ನೇತೃತ್ವದಲ್ಲಿ ಬಸದಿಯು ಸುಂದರ ಪ್ರಾಕೃತಿಕ ಪರಿಸರದಲ್ಲಿ ಸರ್ವಾಂಗ ಸುಂದರವಾಗಿ ಜೀರ್ಣೋದ್ದಾರಗೊಂಡಿದ್ದು ವೃದ್ಧಾಶ್ರಮ, ತ್ಯಾಗಿಭವನ ನಿರ್ಮಾಣ ಮೊದಲಾದ ಕಾರ್ಯಗಳಿಂದ ಕ್ಷೇತ್ರದ ಪಾವಿತ್ರ್ಯತೆ ಹೆಚ್ಚಾಗಿದೆ ಎಂದರು.

ಬಸದಿಯ ಪ್ರಶಾಂತ ಪರಿಸರದಿಂದ ಅತೀವ ಸಂತೋಷಗೊಂಡಿದ್ದು ಮುಂದೆ ಎಂಟು ದಿನ ಇಲ್ಲಿ ಅಷ್ಟಾಹ್ನಿಕಾ ಆಚರಣೆ ಮಾಡುವುದಾಗಿ ತಿಳಿಸಿದರು. ಧರ್ಮ ಪ್ರಭಾವನೆಯಲ್ಲಿ ಬಲ್ಲಾಳ್ ಕುಟುಂಬದ ಸೇವೆಯನ್ನು ಅವರು ಶ್ಲಾಘಿಸಿದರು. ಹೊಂಬುಜ ಕ್ಷೇತ್ರದಲ್ಲಿ ಅತ್ಯಲ್ಪ ಕಾಲದಲ್ಲಿ ಎರಡು ಅತಿಥಿ ಗೃಹಗಳ ನಿರ್ಮಾಣ ಮಾಡಿ ಕೆ. ಜಯವರ್ಮರಾಜ ಬಲ್ಲಾಳ್ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.
ಬಸದಿಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಲ್ಲಾಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.