ADVERTISEMENT

ರೈಲ್ವೆ ಯೋಜನೆ ನೆನೆಗುದಿಗೆ ರಾಜ್ಯವೇ ಕಾರಣ: ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 7:00 IST
Last Updated 16 ಅಕ್ಟೋಬರ್ 2012, 7:00 IST

ಮಂಗಳೂರು: ರಾಜ್ಯದಲ್ಲಿ ರೈಲ್ವೆ ಯೋಜನೆಗಳು ನೆನೆಗುದಿಗೆ ಬೀಳಲು ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಅಗತ್ಯದ ಜಮೀನು ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದರೆ ಶ್ರವಣಬೆಳಗೊಳ-ಕುಣಿಗಲ್ ರೈಲು ಹಳಿ ನಿರ್ಮಾಣ ಮತ್ತು ರಾಮನಗರ-ಮೈಸೂರು ಜೋಡಿ ಹಳಿ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಐಐಎಸ್‌ಸಿ ತಜ್ಞರು 3 ತಿಂಗಳ ಹಿಂದೆಯೇ ವರದಿ ಸಲ್ಲಿಸಿದ್ದು, ಅದು ಪರಿಸರ ಇಲಾಖೆಯ ಪರಿಶೀಲನೆಯಲ್ಲಿದೆ. ಹೆಚ್ಚು ಸುರಂಗ ಮಾರ್ಗ ನಿರ್ಮಿಸಿ ಪರಿಸರ ನಾಶ ತಡೆಯಬೇಕೆಂಬುದು ವರದಿಯ ಮುಖ್ಯಾಂಶವಾಗಿದೆ. ಪರಿಸರ ಇಲಾಖೆಯ ಒಪ್ಪಿಗೆ ದೊರೆತರೆ ಉನ್ನತಾಧಿಕಾರ ಸಮಿತಿಯ ಮುಂದೆ ಈ ವಿಷಯ ಪ್ರಸ್ತಾವನೆಗೊಳ್ಳಲಿದೆ ಎಂದು ಅವರು ಸೋಮವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಯಶವಂತಪುರ-ಕಾರವಾರ ರಾತ್ರಿ ರೈಲಿಗೆ ಈಗಾಗಲೇ ಒಪ್ಪಿಗೆ ನೀಡಲಾಗಿದ್ದು, ಹೊಸ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು. ಕಣ್ಣೂರಿಗೆ ಸಹ ಇದೇ ರೈಲಿನ ಕೆಲವು ಬೋಗಿಗಳು ಸಂಚರಿಸಲಿವೆ. ಹೀಗಾಗಿ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅನುಮತಿ ದೊರೆತರೆ ಹೊನ್ನಾವರ-ತಾಳಗುಪ್ಪ ಮತ್ತು ಬೆಂಗಳೂರು-ಸತ್ಯಮಂಗಲ ಮಾರ್ಗ ನಿರ್ಮಾಣದ ಹಾದಿಯೂ ಸುಗಮವಾಗಲಿದೆ ಎಂದ ಅವರು, ಮಂಗಳೂರು ರೈಲು ನಿಲ್ದಾಣ ಸಹಿತ ದೇಶದ 50 ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲು ಇಲಾಖೆ ನಿರ್ಧರಿಸಿದ್ದರೂ, ರಾಜ್ಯ ಸರ್ಕಾರ ಅಗತ್ಯದ ಜಮೀನು ಒದಗಿಸಿಕೊಡದಿದ್ದರೆ ಈ ಯೋಜನೆ ಕಾರ್ಯಗತಗೊಳ್ಳುವುದು ಸಾಧ್ಯವಿಲ್ಲ. ಮಂಗಳೂರಿನಲ್ಲಿ ಹೆಚ್ಚುವರಿಯಾಗಿ 5 ಎಕರೆ ನಿವೇಶನದ ಅಗತ್ಯ ಇದೆ ಎಂದರು.

ಮಂಗಳೂರು, ಗುಲ್ಬರ್ಗ ಸಹಿತ ಒಟ್ಟು 16 ಹೊಸ ವಿಭಾಗಗಳನ್ನು ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದೆ ಇದೆ. ಆದರೆ ರೈಲ್ವೆ ಮಂಡಳಿ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ಇದು ಕಾರ್ಯಗತಗೊಳ್ಳಲು ಸಾಧ್ಯ ಎಂದ  ಅವರು, ರಾಜ್ಯಕ್ಕೆ ರೈಲ್ವೆ ಇಲಾಖೆ ಯಾವುದೇ ಅನ್ಯಾಯ ಮಾಡಿಲ್ಲ ಎಂದ ಅವರು, ಕಳೆದ ಮೂರು ವರ್ಷಗಳಲ್ಲಿ 90 ಹೊಸ ರೈಲುಗಳು, ವಿಸ್ತರಿತ ರೈಲುಗಳನ್ನು ರಾಜ್ಯಕ್ಕೆ ಒದಗಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.