ADVERTISEMENT

ಲಿಂಗಾಯತ ಧರ್ಮ ವಿಭಜನೆ ಕುರಿತು ಮಾತನಾಡಿ

ಪ್ರಕಾಶ್‌ ರೈಗೆ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 12:41 IST
Last Updated 28 ಏಪ್ರಿಲ್ 2018, 12:41 IST
ನಟ ಪ್ರಕಾಶ್‌ ರೈ ಅವರು ಮಾಡಿದ ಪೋಸ್ಟ್‌
ನಟ ಪ್ರಕಾಶ್‌ ರೈ ಅವರು ಮಾಡಿದ ಪೋಸ್ಟ್‌   

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಪರ ಅವರ ಪತ್ನಿ ಮತಯಾಚನೆ ಮಾಡುತ್ತಿರುವ ಬಗ್ಗೆ ಟ್ವಿಟರ್‌ನಲ್ಲಿ ಪ್ರಶ್ನಿಸಿರುವ ನಟ ಪ್ರಕಾಶ್ ರೈ ಅವರಿಗೆ ಮಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ತಿರುಗೇಟು ನೀಡಿದ್ದಾರೆ.

‘ಧರ್ಮ, ಜಾತಿ ವಿಚಾರಗಳನ್ನು ನಮ್ಮಂತಹ ಸಾಮಾನ್ಯ ಜನರಿಗೆ ಬಿಟ್ಟು ಬಿಡಿ. ನಾವು ಯಾವ ರೀತಿಯ ರಾಜಕೀಯ ಬೇಕಾದರೂ ಮಾಡುತ್ತೇವೆ. ಧರ್ಮ, ಜಾತಿಯ ವಿಚಾರದಲ್ಲಿ ನಿಮ್ಮಿಂದ ಏನನ್ನೂ ತಿಳಿಯಬೇಕಾದುದು ಇಲ್ಲ’ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಪ್ರಕಾಶ್ ರೈ ಅವರಲ್ಲಿ ಮನವಿ ಮಾಡುವುದು ಇಷ್ಟೇ. ನೀವು ಒಬ್ಬ ನಟ. ಸದ್ಯ ನೀವು ಮತ, ಧರ್ಮ, ಜಾತಿ ಎಲ್ಲವನ್ನೂ ಮೀರಿ ಸಂತ ಪದವಿಗೇರಿದ್ದಿರಿ. ನಿಮ್ಮ ಜ್ಞಾನೋದಯ ನಮಗೆ ಸಂತಸ ತಂದಿದೆ’ ಎಂದರು.

ADVERTISEMENT

‘ನಾವು ನಿಮ್ಮ ವೈಯಕ್ತಿಕ ಬದುಕನ್ನು ಮಾತನಾಡಲು ಹೋಗುವುದಿಲ್ಲ. ಅದನ್ನು ಹೇಳಿದರೆ ನೀವು ಹಿಂದೂ ಧರ್ಮ, ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಿರಿ ಎನ್ನುವುದು ಜನರಿಗೆ ಸ್ಪಷ್ಟವಾಗುತ್ತದೆ. ಇನ್ನೊಬ್ಬರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಆಚಾರ -ವಿಚಾರ ನಡೆ - ನುಡಿಗಳು ಸ್ಪಷ್ಟ, ಸ್ವಚ್ಛವಾಗಿರಲಿ’ ಎಂದು ಸಲಹೆ ನೀಡಿದರು.

ವೇದವ್ಯಾಸ ಕಾಮತ್‌ ಅವರ ಪತ್ನಿ ಮತಯಾಚನೆ ಮಾಡುವುದು ನಿಜ. ಇನ್ನೂ ಅದನ್ನು ಮುಂದುವರಿಸುತ್ತಾರೆ. ಅವರು ಏನು ಮಾಡುತ್ತಾರೆ ಎನ್ನುವ ಸ್ಪಷ್ಟತೆ ಅವರಿಗೆ ಇದೆ. ಯಾಕಾಗಿ ಬಿಜೆಪಿಗೆ ಮತ ನೀಡಬೇಕು ಎನ್ನುವುದನ್ನು ಸ್ಪಷ್ಟವಾಗಿ ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ. ಈ ನಾಡಿನಲ್ಲಿ ಹೆಣ್ಣು ಮಕ್ಕಳ ಮಾನ ಮರ್ಯಾದೆ ಉಳಿಯಬೇಕಾದರೆ, ಹೆಣ್ಣು ಮಕ್ಕಳು ಯಾವುದೇ ಭಯವಿಲ್ಲದೇ ಓಡಾಡಬೇಕಾದರೆ ಹಿಂದೂ ಧರ್ಮದ ಉಳಿಯುವುದು ಅಗತ್ಯ ಎಂದು ಅವರು ಹೇಳಿದರು.

ಅದಕ್ಕೆ ಬಿಜೆಪಿಗೆ ಮತ ನೀಡಿ ಎಂದು ಅವರು ಹೇಳಿದ್ದಾರೆ. ನಿಮ್ಮಂಥವರಿಂದ ಈ ನಾಡು ಸುರಕ್ಷಿತವಾಗಿರಬೇಕಾದರೆ, ಖಂಡಿತವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

‘ಕಾಂಗ್ರೆಸ್ ಸರ್ಕಾರ ಲಿಂಗಾಯತ ಹಾಗೂ ವೀರಶೈವರನ್ನು ವಿಭಜಿಸಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಇಲ್ಲವೇ? ಅದು ಧರ್ಮದ ವಿಚಾರ ಅಲ್ಲವೇ? ಅದರ ಬಗ್ಗೆ ನೀವು ಯಾಕೆ ಮಾತನಾಡುವುದಿಲ್ಲ? ಧೈರ್ಯ ಇದ್ದರೆ ಅದರ ಬಗ್ಗೆ ಮಾತನಾಡಿ’ ಎಂದು ಸವಾಲು ಹಾಕಿದರು.

ಕಾತ್ಯಾಯನಿ, ಪೂರ್ಣಿಮಾ ರಾವ್ ಹಾಗೂ ಪಾಲಿಕೆ ಸದಸ್ಯೆ ಪೂರ್ಣಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.