ADVERTISEMENT

ಲೋಕಾಯುಕ್ತಕ್ಕೆ ದೂರು: ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 9:25 IST
Last Updated 11 ಫೆಬ್ರುವರಿ 2011, 9:25 IST

ಹೆಜಮಾಡಿ (ಪಡುಬಿದ್ರಿ): ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾನಯನ ಇಲಾಖೆಯ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹೆಜಮಾಡಿ ಗ್ರಾ.ಪಂ ವಠಾರದಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಮೂರು ನಾಲ್ಕು ವರ್ಷಗಳ ಹಿಂದೆ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನ, ಕೊಕ್ರಾಣಿ ಕುದ್ರು, ಬಾಬು ಸಾಹೇಬ್ ಮನೆ ಬಳಿ, ನಡಿಕುದ್ರು ಸೇರಿ ನಾಲ್ಕು ಕಿಂಡಿ ಅಣೆಕಟ್ಟು ರಚಿಸಲಾಗಿದೆ.ಆದರೆ ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಕಾಮಗಾರಿ ಕಳಪೆಯಾಗಿರುವುದು ಬೆಳಕಿಗೆ ಬಂತು. ಈ ಬಗ್ಗೆ ಪ್ರತೀ ಗ್ರಾಮ ಸಭೆಯಲ್ಲಿ ತನಿಖೆ ನಡೆಸಲು ಆಗ್ರಹಿಸಲಾಗಿತ್ತು.ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಲೋಕಾಯಕ್ತಕ್ಕೆ ದೂರು ನೀಡಿ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಅಧಿಕಾರಿಯೇ ಇಲ್ಲ: ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಜಲಾನಯನ ಇಲಾಖೆಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹಲವು ಕಾಮಗಾರಿಗಳು ನಡೆದಿವೆ. ಆದರೆ ಈ ಬಗ್ಗೆ ಉತ್ತರ ನೀಡಬೇಕಾದ ಜಲಾನಯನ ಇಲಾಖೆ ಅಧಿಕಾರಿಗಳೇ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಮಾಸಕರಿಯ ಅಭಿವೃದ್ಧಿಗೆ ನಿರ್ಣಯ: ಹೆಜಮಾಡಿ ಅಮಾಸಕರಿಯ ಸಮುದ್ರ ಕಿನಾರೆಯಲ್ಲಿ ಅಮವಾಸ್ಯೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುತ್ತಿದ್ದು, ಪ್ರತೀ ವರ್ಷ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಪಡಿಸಲು ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು.

ಗ್ರಾಮಸ್ಥರ ಮಧ್ಯೆ ಜಟಾಪಟಿ: ಗ್ರಾಮಸಭೆ ಆರಂಭದಲ್ಲಿ ವರದಿ ಓದಿದ ಬಳಿಕ ಗ್ರಾಮಸ್ಥರು ಹೆಜಮಾಡಿ ಬಸ್ತಿಪಡ್ಪು ಕ್ರೀಡಾಂಗಣದ ಸ್ವಚ್ಛತೆ ಬಗ್ಗೆ ಪ್ರಶ್ನಿಸುತ್ತಾ ವೈಯಕ್ತಿಕ ಕಾರಣದಿಂದ ಪರಸ್ಪರ ಮಾತಿನ ಚಕಮಕಿ ನಡೆಯಿತು. ಒಂದು ಸಮಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇತ್ತು. ಈ ವೇಳೆ ತಾಪಂ ಮಾಜಿ ಸದಸ್ಯ ನಾರಾಯಣ ಪೂಜಾರಿ ಅವರನ್ನು ಏಕವಚನದಿಂದ ಕರೆದು ಅವಮಾನಿಸಿದ ಘಟನೆಯೂ ನಡೆಯಿತು. ಗ್ರಾ.ಪಂ ವ್ಯಾಪ್ತಿಯು ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾದ ಗ್ರಾಮಸ್ಥರೇ ವೈಯಕ್ತಿಕ ಕಾರಣಕ್ಕೆ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡರು.

ಸ್ವಚ್ಛವೇ ಇಲ್ಲ: ಸ್ವಚ್ಛ ಗ್ರಾಮಕ್ಕೆ ಆಯ್ಕೆಯಾದ ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಿಯೂ ಸ್ವಚ್ಛತೆ ಕಂಡುಬರುತ್ತಿಲ್ಲ. ಸ್ವಚ್ಛತೆ ಇಲ್ಲದಿದ್ದರೂ ಯಾವುದೇ ಕ್ರಮಕ್ಕೆ ಗ್ರಾಪಂ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ವೇಳೆ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಕರ್ಕೇರ, ಸ್ವಚ್ಛಗ್ರಾಮದ ಬಗ್ಗೆ ಈಗಾಗಲೇ ಆಯ್ಕೆಯಾದ ಬಗ್ಗೆ ಪತ್ರಿಕೆಯಲ್ಲಿ ಮಾತ್ರ ಪ್ರಕಟವಾಗಿದೆ. ಆದರೆ ಇದುವರೆಗೂ ಗ್ರಾಪಂಗೆ ಅನುದಾನ ಬಂದಿಲ್ಲ ಎಂದರು.

ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ಅಧ್ಯಕ್ಷೆ ವರದಾಕ್ಷಿ ಪಿ.ಸಾಲ್ಯಾನ್, ಉಪಾಧ್ಯಕ್ಷ ವಾಮನ ಕೋಟ್ಯಾನ್, ಪಿಡಿಓ ಪ್ರತಿಭಾ, ನೋಡಲ್ ಅಧಿಕಾರಿ ಎಸ್.ವಸಂತ್ ಶೆಟ್ಟಿ, ಪ್ರಾಥಮಿಕ ಆರೋಗ್ಯ ಅಧಿಕಾರಿ ಬಿ.ಬಿ.ರಾವ್, ಎಸ್‌ಐ ಮಹದೇವ ಸೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.