ADVERTISEMENT

ವರ್ಷದಲ್ಲೇ ಬಿಜೆಪಿ ಆಡಳಿತ: ಸಂಸದ

ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ; ನಳಿನ್‌ ಕುಮಾರ್‌ ಕಟೀಲು

​ಪ್ರಜಾವಾಣಿ ವಾರ್ತೆ
Published 28 ಮೇ 2018, 7:22 IST
Last Updated 28 ಮೇ 2018, 7:22 IST

ಬೆಳ್ತಂಗಡಿ: ‘ಕೇಂದ್ರ ಸರ್ಕಾರ 4 ವರ್ಷ ದಲ್ಲಿ ಜಿಲ್ಲೆಗೆ ₹15 ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದರೂ ಇಲ್ಲಿನ ಶಾಸಕರುಗಳು ಸದುಪಯೋಗ ಮಾಡಿಲ್ಲ. ಇದೀಗ ಜನತೆ ಜಿಲ್ಲೆಯಲ್ಲಿ ಬಿಜೆಪಿಯ 7 ಶಾಸಕರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದಾರೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಭಾನುವಾರ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿಅಮ್ಮ ಸಭಾಭವನದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಕಾರ್ಯ ಕರ್ತರಿಗೆ ಅಭಿವಂದನೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವರ್ಷದಲ್ಲಿ ಬಿಜೆಪಿ ಆಡಳಿತ: ಜಿಲ್ಲೆ ಯಲ್ಲಿ 7 ಶಾಸಕರು ಆಯ್ಕೆಯಾಗಿದ್ದು ಕೇಂದ್ರ ಸರ್ಕಾರದ ಅನುದಾನವನ್ನು ಸದ್ವಿನಿಯೋಗಿಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗುವುದು. ರಾಜ್ಯ ಚುನಾವಣೆಯಲ್ಲಿ ಜಸ್ಟ್ ಪಾಸ್ ಆದವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಒಂದು ವರ್ಷದೊಳಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಿ ಉತ್ತಮ ಆಡಳಿತ ನಡೆಸಲಿದೆ ಎಂದರು.

ADVERTISEMENT

‘ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ‘ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ತಯಾರಾಗಬೇಕು, ಜಾತಿ, ಧರ್ಮಕ್ಕಿಂತ ದೇಶ ಮುಖ್ಯ’ಎಂದರು.

ಅಭಿನಂದನಾ ಭಾಷಣ ಮಾಡಿದ ಕ್ಷೇತ್ರ ಸಂಯೋಜಕ ಕುಂಟಾರು ರವೀಶ ತಂತ್ರಿ ಅವರು, ‘ಬೆಳ್ತಂಗಡಿಯಲ್ಲಿ  ಜನರ ಪ್ರೀತಿಯಿಂದ ಹರೀಶ ಪೂಂಜ ಗೆಲುವು ಸಾಧ್ಯವಾಗಿದೆ ’ಎಂದರು.

ಶಾಸಕ ಹರೀಶ ಪೂಂಜ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ, ‘ನನ್ನೊಂದಿಗೆ ಇದ್ದ ಯುವಕರಿಗೆ ಏನೂ ಗೊತ್ತಿಲ್ಲ ಎಂದು ಲೇವಡಿ ಮಾಡುತ್ತಿದ್ದರಿಗೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಗೆ ಎಲ್ಲರೂ ನನ್ನೊಂದಿಗೆ ಕೈಜೋಡಿಸಬೇಕು’ ಎಂದರು.

ಜಿಲ್ಲಾ ಚುನಾವಣಾ ಸಂಚಾಲಕ ಮೋನಪ್ಪ ಭಂಡಾರಿ ಹಾಗೂ ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್ ಅಭಿನಂದಿಸಿದರು. ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಪ್ರಮುಖರಾದ ವಕೀಲ ನೇಮಿರಾಜ ಶೆಟ್ಟಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪ್ರಮುಖರಾದ ಶಾರದ ಆರ್. ರೈ, ಭಾಗೀರಥಿ ಮುರುಳ್ಯ, ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಎಂ. ಶೆಟ್ಟಿ, ಸೌಮ್ಯಲತಾ ಜೆ. ಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ವೇದಾವತಿ, ವಿವಿಧ ಮೋರ್ಚಾಗಳ ತಾಲ್ಲೂಕು ಅಧ್ಯಕ್ಷರುಗಳಾದ ಸಂಪತ್ ಬಿ. ಸುವರ್ಣ, ಶಶಿಧರ ಕಲ್ಮಂಜ, ಧನಲಕ್ಷ್ಮೀ ಜನಾರ್ಧನ್, ಸದಾಶಿವ ಕರಂಬಾರು ಇದ್ದರು.

ಸ್ವಸ್ತಿಕ್ ಬೆಳ್ತಂಗಡಿ , ಮಂಡಲ ಉಪಾಧ್ಯಕ್ಷ ಜಯಂತ ಕೋಟ್ಯಾನ್ , ಸೀತಾರಾಮ ಬೆಳಾಲು , ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಮೇಶ ನಡ್ತಿಕಲ್ ಹಾಗೂ ಶ್ರೀನಿವಾಸ ರಾವ್ ಇದ್ದರು.

ಮೂಡುಬಿದಿರೆಯಲ್ಲಿ ಬಿಜೆಪಿ ವಿಜಯೋತ್ಸವ

ಮೂಡುಬಿದಿರೆ: ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಪ್ರಥಮ ಶಾಸಕರಾಗಿ ಚುನಾಯಿತರಾದ ಉಮನಾಥ ಕೋಟ್ಯಾನ್ ಅವರ ವಿಜಯೋತ್ಸವದ ವಾಹನ ಜಾಥವು ವಿವಿಧೆಡೆ ಭಾನುವಾರ ನಡೆಯಿತು. ವಿದ್ಯಾಗಿರಿಯ ಬಿಜೆಪಿ ಕಚೇರಿ ಬಳಿ  ಶಾಸಕ ಉಮನಾಥ ಕೋಟ್ಯಾನ್  ಮಾತನಾಡಿ, ‘ಕಾರ್ಯಕರ್ತರೇ ನನ್ನ ಶಕ್ತಿ’ ಎಂದರು.  ಜಾಥಾಕ್ಕೆ ಚಾಲನೆ ನೀಡಿದರು.

ಮೂಡುಬಿದಿರೆ ನಗರ, ಕೋಟೆಬಾಗಿಲು-ಪಡುಕೊಣಾಜೆ- ಶಿರ್ತಾಡಿ ಪೇಟೆ, ಅಳಿಯೂರು, ದರೆಗುಡ್ಡೆ, ಬೆಳುವಾಯಿ, ಅಲಂಗಾರು, ಪುತ್ತಿಗೆ ಕೊಡ್ಯಡ್ಕ, ಕಡಂದಲೆ, ಕಿನ್ನಿಗೋಳಿ, ದಾಮಸ್ಕಟ್ಟೆ, ಮೂರು ಕಾವೇರಿ, ಕಿನ್ನಿಗೋಳಿ ಪೇಟೆ, ಎಸ್ಕೋಡಿ, ಪುನರೂರು, ಕೆರೆಕಾಡು, ಅಂಗಾರಗುಡ್ಡೆ, ಕಾರ್ನಾಡು, ಮೂಲ್ಕಿ ಪೇಟೆ, ಪಡುಪಣಂಬೂರು, ಹಳೆಯಂಗಡಿ, ಪಾವಂಜೆ, ಚೇಳ್ಯಾರು, ಶಿಬರೂರು, ಎಕ್ಕಾರು, ಪೆರ್ಮುದೆ, ಬಜ್ಪೆ ಪೇಟೆ, ಕಾರಂಬಾರು, ಮಳವೂರು, ಪಡುಶೆಡ್ಡೆ- ಮೂಡುಶೆಡ್ಡೆ ಮುಂತಾದೆಡೆ ಜಾಥಾ ಸಂಚರಿಸಿತು. ಈಶ್ವರ್ ಕಟೀಲು, ಸುಖೇಶ್ ಶೆಟ್ಟಿ, ಮೇಘನಾದ ಶೆಟ್ಟಿ ಇದ್ದರು.

**
ದ್ವೇಷ ರಾಜಕಾರಣ ಮಾಡುವುದಿಲ್ಲ. ಮಾಜಿ ಶಾಸಕ, ಹಿರಿಯರಾದ ವಸಂತ ಬಂಗೇರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯನ್ನು ಮಾಡುತ್ತೇನೆ
ಹರೀಶ ಪೂಂಜ, ಶಾಸಕ

**
ಜನಸಂಘದ ಕಾಲದಿಂದಲೇ ಇದ್ದವ. ನಾನು ಒಂದು ಕಾಲದಲ್ಲಿ ಬಿಜೆಪಿ ತೊರೆದಿದ್ದರೂ ಬಿಜೆಪಿಯೇ. ಬಿ. ಜನಾರ್ದನ ಪೂಜಾರಿಯವರ ಶಿಷ್ಯನಾಗಿದ್ದೆ ಅಷ್ಟೇ
ಹರಿಕೃಷ್ಣ ಬಂಟ್ವಾಳ, ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.