ADVERTISEMENT

ವಾರಾಹಿ ಯೋಜನೆ ಅಪೂರ್ಣ: ಅಧಿಕಾರಿಗಳಿಗೆ ತರಾಟೆ

ಕುಂದಾಪುರ: ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:48 IST
Last Updated 22 ಜೂನ್ 2013, 12:48 IST

ಕುಂದಾಪುರ: ಕೆಲವುವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ವಾರಾಹಿ ಯೋಜನೆ ಪೂರ್ತಿ ಗುತ್ತಿಗೆದಾರರ ಹಿಡಿತಕ್ಕೆ ಒಳಗಾಗಿದೆ. ಯೋಜನೆ ಈ ರೀತಿ ವಿಳಂಬವಾಗಲು ಇರುವ ವಾಸ್ತವ ತೊಡಕಾದರು ಏನು? ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಜನರು ನಿರೀಕ್ಷಿಸು ತ್ತಿರುವ ಈ ಯೋಜನೆಯ ಶೀಘ್ರ ಅನು ಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆ ಗಳಲ್ಲಿಯೂ ಪರಸ್ವರ ಸಮನ್ವಯ ಇರಬೇಕು ಎಂದು ಹೇಳಿದರು.

ಕುಂದಾಪುರದ ತಾಲ್ಲೂಕು ಪಂಚಾ ಯಿತಿ ಸಭಾಂಗಣದಲ್ಲಿ ಶುಕ್ರ ವಾರ ಸಂಜೆ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ವಾರಾಹಿ ಯೋಜನೆಯ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ ಸಚಿವರು, ಯೋಜನೆಯ ವಿಳಂಬವಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಯೋಜನೆಯ ಪ್ರಗತಿಯ ಬಗ್ಗೆ ಅನಗತ್ಯ ಕಾಲಾಹರಣ ನಡೆಸಿದರೆ ಸರ್ಕಾರ ಕಣ್ಣು ಮುಚ್ಚಿ ಕೂರುವುದಿಲ್ಲ ಎನ್ನುವುದನ್ನು ಸೂಕ್ಷ್ಮ ಮಾತುಗಳಲ್ಲಿ ಎಚ್ಚರಿಸಿದ ಅವರು ಮುಂದಿನ ಪ್ರಗತಿ ಪರಿಶೀಲನಾ ಸಭೆಗಿಂತ ಮೊದಲು ಯೋಜನೆಯ ಅನುಷ್ಠಾನದ ಕುರಿತು ಕಡ್ಡಾಯವಾಗಿ ಪ್ರಗತಿ ಇರಬೇಕು ಎನ್ನುವುದನ್ನು ಒತ್ತಿ ಹೇಳಿದರು. ಡೀಮ್ಡ ಫಾರೆಸ್ಟ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡು ಕೃಷಿಕರಿಗೆ ನೀರುಣಿಸುವ ಕೆಲಸ ಆಗಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆಗೆ ಸಂಬಂಧಿಸಿದ ಯಾವುದೇ  ಕಡತಗಳಲ್ಲಿಯೂ ತಾನು `ಡೀಮ್ಡ ಫಾರೆಸ್ಟ್' ಎನ್ನುವ ಶಬ್ದವೇ ಕಂಡಿಲ್ಲ ಎಂದರು. ಇದಕ್ಕೆ ಪೂರಕವಾಗಿ ಮಾತ ನಾಡಿದ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಯವರು `ಡೀಮ್ಡ ಫಾರೆಸ್ಟ್' ಎಂದು ಹೇಳಲಾದ ಪ್ರದೇಶಗಳಲ್ಲಿಯೇ ಈಗಾಗಲೇ ಕಾಮಗಾರಿಗಳು ನಡೆದಿವೆ ಮಾತ್ರವಲ್ಲ, ಕಾಮಗಾರಿಗೆ ಸಂಬಂಧಿಸಿದ ಹಣ ಪಾವತಿಯಾಗಿರುವಾಗ ಈ  ಡೀಮ್ಡ ಫಾರೆಸ್ಟ್ ಏಕಾಏಕಿ ಎಲ್ಲಿಂದ ಬಂತು ಎಂದು  ಪ್ರಶ್ನಿಸಿದರು.

ತಾಲ್ಲೂಕಿನ ವಿವಿಧ ಇಲಾಖೆಗಳ ಹಾಗೂ ವಿವಿಧ ಯೋಜನೆಗಳ ಬಗ್ಗೆ ಪ್ರಗತಿ ಪರೀಶೀಲನೆ ನಡೆಸಿದ ಸಚಿವರು, ಆಕ್ರಮ-ಸಕ್ರಮಕ್ಕಾಗಿ ಬಾಕಿ ಉಳಿದಿರುವ ಅರ್ಜಿಗಳ ಬಾಕಿ ಹಾಗೂ ವಿಲೇವಾರಿ ಕುರಿತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯನ್ನು ತಂದು ಕೊಳ್ಳುವು ದರ ಮೂಲಕ ರಾಜೀವಗಾಂಧಿ ವಸತಿ ಯೋಜನೆ, ಬಸವ ಕಲ್ಯಾಣ ವಸತಿ ಯೋಜನೆ, ಇಂದಿರಾ ಅವಾಜ್ ಯೋಜ ನೆಗಳಲ್ಲಿ ಬಡವರಿಗೆ ಮನೆ ಹಾಗೂ ನಿವೇಶನ ಹಂಚಿಕೆಯಾಗಬೇಕು ಎಂದರು.

ಕಳೆದ ಒಂದೆರಡು ವರ್ಷಗಳಿಂದ ಅಕ್ರಮ- ಸಕ್ರಮ ಕಡತಗಳ ವಿಲೇವಾ ರಿವಾಗದೆ ಸ್ಥಗಿತಗೊಂಡಿದ್ದು, ಯಾವುದೇ ಸರ್ಕಾರದ ಯೋಜನೆಗಳ ಕುರಿತಿ ಅರ್ಜಿ ಸಲ್ಲಿಸಿದವರಿಗೆ ತಮ್ಮ  ಅರ್ಜಿಗಳು ತಿರಸ್ಕೃತವಾದ ಬಗ್ಗೆ ಮಾಹಿತಿ ನೀಡು ವುದು ಅತ್ಯಂತ ಅವಶ್ಯ. ಮುಂದಿನ ಒಂದು ತಿಂಗಳ ಒಳಗೆ ಸುಮಾರು ಒಂದು ಸಾವಿರ ಜನರಿಗೆ ಹಕ್ಕುಪತ್ರ ನೀಡುವ ಕಾರ್ಯವನ್ನು ಕಂದಾಯ ಇಲಾಖೆ ಮಾಡಬೇಕು. ಗೊಂದಲ ಸರಿಪಡಿಸಿ ಕೊಂಡು ಪ್ರಗತಿಯ ಬಗ್ಗೆ ಸಾಮೂಹಿಕ ಪ್ರಯತ್ನಗಳು ಆಗಬೇಕು ಎಂದರು.

ರಾತ್ರಿ 8ರವರೆಗೂ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಎಸ್.ಎ.ಪ್ರಭಾಕರ ಶರ್ಮಾ , ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಉಪ ವಿಭಾಗಾಧಿಕಾರಿ ಯೋಗೀಶ್ವರ್, ತಹಶೀಲ್ದಾರ್ ಗಾಯತ್ರಿ ನಾಯಕ್,  ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.