ADVERTISEMENT

ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಂಧಲೆ: ಪೊಲೀಸ್‌ ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 12:47 IST
Last Updated 17 ಜೂನ್ 2019, 12:47 IST

ಮಂಗಳೂರು: ಇಲ್ಲಿನ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಅಪಘಾತದ ಗಾಯಾಳು ಒಬ್ಬರನ್ನು ಕರೆತಂದಿದ್ದ ಕೆಲವರು, ಚಿಕಿತ್ಸೆ ನೀಡುವುದು ತಡವಾಯಿತೆಂದು ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಿದ್ದಾರೆ.

ಗಾಯಾಳುವನ್ನು ಕರೆತಂದಿದ್ದ ಕೆಲವು ಅಪರಿಚಿತರು, ಒಂದೂವರೆ ಗಂಟೆ ಕಳೆದರೂ ಚಿಕಿತ್ಸೆ ನೀಡಿಲ್ಲ ಎಂದು ವೈದ್ಯರು ಮತ್ತು ದಾದಿಯರ ಮೇಲೆ ಹರಿಹಾಯ್ದಿದ್ದಾರೆ. ಬೇರೆಡೆ ಕರೆದೊಯ್ಯಲು ಆಂಬುಲೆನ್ಸ್‌ ಒದಗಿಸಿಲ್ಲ ಎಂದು ರೇಗಿದ್ದಾರೆ. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳನ್ನು ಬಳಸಿ ವೈದ್ಯರು ಮತ್ತು ಆಸ್ಪತ್ರೆಯ ಆಡಳಿತವನ್ನು ನಿಂದಿಸಿದ್ದಾನೆ.

ಇಡೀ ಘಟನೆಯ ಚಿತ್ರಣವನ್ನು ವಿಡಿಯೊ ರೆಕಾರ್ಡಿಂಗ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅದೇ ರೀತಿ ಮೂರು ನಿಮಿಷಗಳ ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ತುಳು ಭಾಷೆಯಲ್ಲಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ವಾಚಾಮಗೋಚರ ನಿಂದಿಸುತ್ತಿರುವುದು ವಿಡಿಯೊ ತುಣುಕಿನಲ್ಲಿದೆ.

ADVERTISEMENT

ಈ ಸಂಬಂಧ ಸೋಮವಾರ ನಗರ ಪೊಲೀಸರಿಗೆ ದೂರು ನೀಡಿರುವ ಆಸ್ಪತ್ರೆಯ ಅಧೀಕ್ಷಕಿ, ದಾಂಧಲೆ ನಡೆಸಿದ ಅಪರಿಚಿತರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಘಟನೆಯ ದೃಶ್ಯಾವಳಿಗಳನ್ನೂ ಪೊಲೀಸರಿಗೆ ಒದಗಿಸಿದ್ದಾರೆ.

‘ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ವ್ಯಕ್ತಿಯು ವೈದ್ಯರು ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಈ ಸಂಬಂಧ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ತನಿಖೆಗಾಗಿ ಪೊಲೀಸರಿಗೆ ಒದಗಿಸಿದ್ದೇವೆ’ ಎಂದು ಡಾ.ರಾಜೇಶ್ವರಿ ದೇವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.