ADVERTISEMENT

ಶಾಸಕರ ಹಸ್ತಕ್ಷೇಪ ದೂರು: 23ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 10:40 IST
Last Updated 23 ಏಪ್ರಿಲ್ 2012, 10:40 IST

ಸುಳ್ಯ: ಸಂವಿಧಾನದತ್ತ, ಕಾನೂನುಬದ್ಧ ಮತ್ತು ಸ್ವತಂತ್ರ ಅಧಿಕಾರ ಹೊಂದಿರುವ ಪಂಚಾಯಿತಿಗಳಲ್ಲಿ ಸರ್ಕಾರ ಮತ್ತು ಶಾಸಕರು ಹಸ್ತಕ್ಷೇಪ ನಡೆಸುತ್ತಿದ್ದು, ಇದರಿಂದ ಈ ವ್ಯವಸ್ಥೆ ದುರ್ಬಲಗೊಳ್ಳುವಂತಾಗಿದೆ.

ಇದನ್ನು ಖಂಡಿಸಿ ಸುಳ್ಯ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಯೋಜನೆಗಳ ರಾಜ್ಯ ಉಸ್ತುವಾರಿ ಸಮಿತಿ ಸದಸ್ಯ ಭರತ್ ಮುಂಡೋಡಿ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡಸರೂ ಆಗಿರುವ ಅವರು ಸುಳ್ಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚಾಯಿತಿಗಳು ನಡೆಸಬೇಕಾದ ವಸತಿ ಯೋಜನೆಗಳ ಆಯ್ಕೆಯನ್ನೂ ಶಾಸಕರ ಅನುಮೋದನೆಯಂತೆ ಮಾಡುವಂತಾಗಿದೆ. ಮುಖ್ಯಮಂತ್ರಿಗಳು ಪಂಚಾಯಿತಿಗಳಿಗೆ ಅನುದಾನ ಘೋಷಣೆ ಮಾಡುತ್ತಿದ್ದಾರೆಯೇ ಹೊರತು ಅವು ಪಂಚಾಯಿತಿಗೆ ಬರುವುದಿಲ್ಲ ಎಂದರು.

ಈಗ ರಾಜ್ಯ ಸರ್ಕಾರ ಕೇಂದ್ರದಿಂದ ಹಣ ಕೇಳುತ್ತಿದೆ. ಆದರೆ 2009-10ರಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಹಣದ ಪೈಕಿ ಶೇ.50 ಮಾತ್ರ ರಾಜ್ಯ ಸರ್ಕಾರ ವಿನಿಯೋಗಿಸಿದೆ. ಹೀಗಾಗಿ ಅವರು ಈಗ ಹಣ ನೀಡುವಾಗ ಶೇ.50 ಕಡಿತ ಮಾಡಿಯೇ ನೀಡುತ್ತಿದ್ದಾರೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಅಧ್ಯಕ್ಷತೆಯ ಉಸ್ತುವಾರಿ ಸಮಿತಿ ಮೂರು ತಿಂಗಳಿಗೊಮ್ಮ ಸಭೆ ನಡೆಸಬೇಕೆಂದಿದೆ. ಆದರೆ ಬಿಜೆಪಿ ಭಿನ್ನಮತದ ಪರಿಣಾಮ ಸಭೆಯೇ ಆಗಿಲ್ಲ. ಇದು ಇವರಿಗೆ ಅಭಿವೃದ್ಧಿ ಕೆಲಸದ ಮೇಲಿರುವ ಕಾಳಜಿ ಎಂದು ವ್ಯಂಗ್ಯವಾಡಿದರು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ, ನಮ್ಮ ಪಕ್ಷದ ಪಾಲಿಗೆ ಇದು ಚಳವಳಿ ಮತ್ತು ಪ್ರತಿಭಟನೆಯ ವರ್ಷವಾಗಿದ್ದು ಜನರ ಸಮಸ್ಯೆಯನ್ನು ಮುಂದಿಟ್ಟು ಅವರಿಗೆ ನ್ಯಾಯ ಒದಗಿಸಿ ಕೊಡಲು ಶ್ರಮಿಸುವುದಾಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ.ಮಹಮ್ಮದ್, ಕಾಂಗ್ರೆಸ್ ಬೆಂಬಲಿತ ಪಂಚಾಯಿತಿಗಳ ಒಕ್ಕೂಟದ ಅಧ್ಯಕ್ಷ ಜಿ.ಕೆ.ಹಮೀದ್, ಕಾರ್ಯದರ್ಶಿ ಕರುಣಾಕರ ನೆಕ್ರೆಪ್ಪಾಡಿ, ಸಂಚಾಲಕ ಶಿವರಾಮ ರೈ, ಗುಣವರ್ಧನ ಕೆದಿಲ ಇದ್ದರು.

ಅಮಾನತಾದ ಪಂಚಾಯಿತಿ ಕಾರ್ಯದರ್ಶಿ ಮತ್ತೆ ನೇಮಕ
ಮರ್ಕಂಜ ಮತ್ತು ಗುತ್ತಿಗಾರು ಪಂಚಾಯಿತಿಗಳಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತು ಅವ್ಯವಹಾರಕ್ಕಾಗಿ ಕಾರ್ಯದರ್ಶಿ ಪ್ರೇಮ್ ಸಿಂಗ್ ಅಮಾನತುಗೊಂಡು ಜೈಲಿಗೆ ಹೋಗಿದ್ದರು. ಆದರೆ ಈಗ ಅವರ ಅಮಾನತನ್ನು ಹಿಂತೆಗೆದುಕೊಂಡು ಅವರನ್ನು ಮೂಡುಬಿದಿರೆಗೆ ನೇಮಕ ಮಾಡಿದ್ದಾರೆ.

ಈ ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುದೊಂದು ಸರ್ಟಿಫಿಕೇಟ್. ಭ್ರಷ್ಟರಿಗೆ ರಕ್ಷಣೆ, ಜನರಿಗೆ ಬವಣೆ ಎಂಬುದಕ್ಕೆ ಇದು ಸಾಕ್ಷಿ ಎಂಬಂತಾಗಿದೆ ಎಂದು ಭರತ್ ಮುಂಡೋಡಿ ಲೇವಡಿ ಮಾಡಿದರು.

ಚಾರ್ಜ್‌ಶೀಟ್ ಹಾಕಿಲ್ಲ:
ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಪ್ರೇಮ್ ಸಿಂಗ್ ಜೈಲು ಸೇರಿದ್ದರು. 60 ದಿನ ಕಳೆದರೂ ಪೊಲೀಸರು ಅವರ ವಿರುದ್ಧ ಚಾರ್ಜ್‌ಶೀಟ್ ಹಾಕಿಲ್ಲ. ಹಾಗಾಗಿ ಅವರಿಗೆ ಜಾಮೀನು ಸುಲಭವಾಗಿ ಸಿಕ್ಕಿದೆ.  ಇದರಿಂದ ಸರ್ಕಾರ ಭ್ರಷ್ಟಾಚಾರಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬು ಸ್ಪಷ್ಟಗೊಂಡಿದೆ ಎಂದು ವೆಂಕಪ್ಪ ಗೌಡ ಆರೋಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT