ADVERTISEMENT

ಸಂಚಾರ ನಿಯಂತ್ರಣಕ್ಕೆ ಹರಸಾಹಸ

ಪೆರ್ನೆ: ಟ್ಯಾಂಕರ್ ಸ್ಫೋಟ- ವ್ಯಾಪಕ ಬೆಂಕಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:30 IST
Last Updated 10 ಏಪ್ರಿಲ್ 2013, 8:30 IST

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಪೆರ್ನೆಯಲ್ಲಿ ಮಂಗಳವಾರ ಬೆಳಿಗ್ಗೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡು ಎಂಟು ಮಂದಿಯ ಸಾವಿಗೆ ಕಾರಣವಾಗಿರುವ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿ ಬರುತ್ತಿದ್ದ ನಾಗರಿಕರನ್ನು ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಯಿತು.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ವೇಗದಿಂದ ಚಲಾಯಿಸಿದ ಪರಿಣಾಮ ಉರುಳಿಬಿದ್ದಿದೆ. ಇದೇ ವೇಳೆ ರಸ್ತೆ ಮೇಲಿನಿಂದ ಹಾದು ಹೋಗಿದ್ದ ವಿದ್ಯುತ್ ತಂತಿಯೂ ತುಂಡಾಗಿ ಬಿದ್ದಿದೆ. ಮಾತ್ರವಲ್ಲ, ಪಕ್ಕದ ಅಂಗಡಿ ಮತ್ತು ಮನೆಗಳಿಗೂ ಬೆಂಕಿ ವಿಸ್ತರಿಸಿತು.

ಬೆಂಕಿ ಕೆನ್ನಾಲಗೆ ವಿಸ್ತರಿಸಿದ ಪರಿಣಾಮ ಬೇಕರಿ ತಿಂಡಿ ಮತ್ತು ತಂಪು ಪಾನೀಯ ವಿತರಣೆಗಾಗಿ ಬಂದಿದ್ದ ಮಾರುತಿ ಓಮ್ನಿ ಮತ್ತು ಟೆಂಪೊ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳೀಯ ತೆಂಗು, ಅಡಿಕೆ, ಬಾಳೆಗಿಡ, ಹಲಸು, ಮಾವಿನ ಮರ ಸುಟ್ಟು ಹೋಗಿ ಪರಿಸರ ಬರಡುಭೂಮಿಯಂತೆ ಭಾಸವಾಗುತ್ತಿದೆ. ಮನೆಯ ಆಡು, ನಾಯಿ, ಕೋಳಿ ಮತ್ತಿತರ ಸಾಕುಪ್ರಾಣಿಗಳು ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಅಂದಾಜು ಒಂದು ಸಾವಿರ ಮಂದಿ ಸುತ್ತಮುತ್ತಲಿನಿಂದ ಅಲ್ಲಿಗೆ ಧಾವಿಸಿದರು. ಬಂಟ್ವಾಳ ಸಹಿತ ವಿವಿಧ ಕಡೆಗಳಿಂದ ಆಂಬುಲೆನ್ಸ್  ಮತ್ತು ಅಗ್ನಿಶಾಮಕ ದಳ ಕೂಡಾ ಆಗಮಿಸಿ ಕಾರ್ಯಾಚರಣೆಯಲ್ಲಿ ನಿರತವಾಗಿದ್ದವು. ಇನ್ನೊಂದೆಡೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಸುಗಮಗೊಳಿಸುವುದಕ್ಕಾಗಿ ಪುತ್ತೂರು-ಮಾಣಿ-ಉಪ್ಪಿನಂಗಡಿ ರಸ್ತೆ ಬಳಸಲು ಪೊಲೀಸರು ಕ್ರಮ ಕೈಗೊಂಡರು.

ಸಂಜೆ ನಾಲ್ಕೂವರೆ ಗಂಟೆ ನಂತರ ಸಂಚಾರ ಸುಗಮಗೊಳಿಸಲಾಯಿತು. ಪುತ್ತೂರು ಎಎಸ್‌ಪಿ ಸದಾನಂದ ವರ್ಣೇಕರ್ ನೇತೃತ್ವದಲ್ಲಿ ಬಂಟ್ವಾಳ, ಉಪ್ಪಿನಂಗಡಿ, ಪುತ್ತೂರು, ವಿಟ್ಲ ಮತ್ತಿತರ ಠಾಣೆಯಿಂದ 50ಕ್ಕೂ ಹೆಚ್ಚು ಪೊಲೀಸರು ಶ್ರಮಪಟ್ಟಿದ್ದಾರೆ ಎಂದು ಬಂಟ್ವಾಳ ವೃತ್ತನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಭೇಟಿ: ಘಟನಾ ಸ್ಥಳಕ್ಕೆ ಡಿ.ವಿ.ಸದಾನಂದ ಗೌಡ,  ಬಿ.ರಮಾನಾಥ ರೈ, ಕೆ.ಪದ್ಮನಾಭ ಕೊಟ್ಟಾರಿ, ರಾಜೇಶ್ ನಾಯ್ಕ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.