ADVERTISEMENT

ಸಂಸ್ಕಾರ ರೂಪಿಸಲು ತುಳು ಸಂಸ್ಕೃತಿ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:25 IST
Last Updated 17 ಆಗಸ್ಟ್ 2012, 9:25 IST

ಮಂಗಳೂರು: `ಯುವಜನತೆಯಲ್ಲಿ ಉತ್ತಮ ಸಂಸ್ಕಾರವನ್ನು ರೂಪಿಸಲು ಅವರಿಗೆ ತುಳು ಸಂಸ್ಕೃತಿಯನ್ನು ಪರಿಚಯಿಸುವುದು ಅಗತ್ಯ~ ಎಂದು ಕರ್ನಾಟಕ ತುಳು ಸಾಹಿತ್ಯ ಪರಿಷತ್ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ಅವರು ಹೇಳಿದರು.

ನಾರಾಯಣಗುರು ಯುವವೇದಿಕೆ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಪುರಭವನದಲ್ಲಿ ಈಚೆಗೆ ಜರುಗಿದ `ಮರಿಯಲದ ಮಿನದನ~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಆಧುನಿಕ ಬದುಕು ಎಷ್ಟೇ ಮುಂದುವರಿದಿದ್ದರೂ, ಹಿರಿಯರು ಅನುಭವಿಸುತ್ತಿದ್ದ ನೋವು ನಲಿವುಗಳು ಹಾಗೂ ನಿಸರ್ಗದೊಂದಿಗಿನ ಅವರ ಅನುಸಂಧಾನ ಗಳನ್ನು ಈಗಿನ ಯುವಜನತೆಗೆ ಪರಿಚಯಿಸುವ ದೃಷ್ಟಿಯಿಂದ ತುಳು ಸಂಸ್ಕ್ರತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯಬೇಕು. ಕೇವಲ ಪ್ರಚಾರಕ್ಕಾಗಿ ಮಾಡುವ ಆಡಂಬರದ ಪ್ರದರ್ಶನ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ತುಳುನಾಡಿನ ಪ್ರತಿಯೊಂದು ತಿಂಗಳಿಗೂ ವಿಶೇಷ ಮಹತ್ವವಿದೆ. ಇಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಪ್ರಯತ್ನ ನಡೆಯಬೇಕು~ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎನ್ ವಿಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ರೈ ಪ್ರಮೋಟರ್ಸ್‌ನ ಮಾಲೀಕ ಪುರುಷೋತ್ತಮ ರೈ, ನಗರಪಾಲಿಕೆ ಸದಸ್ಯೆ ಮೀರಾ ಅಶೋಕ್ ಕುಮಾರ್, ಯುವವೇದಿಕೆ ಅಧ್ಯಕ್ಷ ದೇವದಾಸ್ ಆಯರ್‌ಮಾರ್ ಅತಿಥಿಗಳಾಗಿದ್ದರು.

`ತುಳುನಾಡ್‌ಡ್ ಮರಿಯಾಲದ ಕಟ್ಟ್ ಕಟ್ಟಳೆಲು~ ವಿಚಾರವಾಗಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮತ್ತು `ತುಳುನಾಡ್‌ಡ್ ಮರಿಯಲದ ಒಣಸ್‌ತೆನಸ್~ ವಿಚಾರವಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಬಿ. ಶಿವರಾಮ ಶೆಟ್ಟಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಒಟ್ಟು 23 ತಂಡಗಳು ಭಾಗವಹಿಸಿದ್ದವು. ಮಂಗಳೂರಿನ ನಾರಾಯಣಗುರು ಕಾಲೇಜು, ಗೋಕರ್ಣನಾಥ ಕಾಲೇಜು ಹಾಗೂ ಸುಂಕದಕಟ್ಟೆಯ ನಿರಂಜನ ಸ್ವಾಮಿ ಕಾಲೇಜುಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿತು. ನಾರಾಯಣಗುರು ಯುವವೇದಿಕೆ ಮತ್ತು ಕರ್ನಾ ಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.