ADVERTISEMENT

ಸಂಸ್ಕೃತಿ, ಜನಜೀವನದ ಅನಾವರಣಕ್ಕೆ ವಿದ್ಯಾಗಿರಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 4:26 IST
Last Updated 1 ಡಿಸೆಂಬರ್ 2017, 4:26 IST

ಮೂಡುಬಿದಿರೆ: ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್‌ ನುಡಿಸಿರಿ’ಗೆ ಮೂಡುಬಿದಿರೆ ಸಜ್ಜಾಗಿದ್ದು ಶುಕ್ರವಾರ ಬೆಳಿಗ್ಗೆ ವಿಮರ್ಶಕ ಡಾ. ಸಿ.ಎನ್‌. ರಾಮಚಂದ್ರನ್‌ ಅವರು ಸಮ್ಮೇಳನ ಉದ್ಘಾಟಿಸುವರು.

ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಆರಂಭವಾಗಿದ್ದ ನುಡಿಸಿರಿ ಇದೀಗ ತನ್ನ ವ್ಯಾಪ್ತಿ ಹಿಗ್ಗಿಸಿಕೊಂಡಿದ್ದು, ಕೃಷಿ, ಉದ್ಯೋಗ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿದೆ. ಎಸ್ಸೆಸ್ಸೆಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ‘ಉದ್ಯೋಗ ಸಿರಿ’ಯನ್ನು ಈ ಬಾರಿ ಆರಂಭಿಸಲಾಗಿದೆ. ಕರಾವಳಿ ಕೃಷಿ ಬದುಕನ್ನು ಅನಾವರಣಗೊಳಿಸುವ ಕೃಷಿಸಿರಿಯಲ್ಲಂತೂ ಸಾಗುವಳಿ ಹಾಗೂ ಮತ್ಸ್ಯೋದ್ಯಮದತ್ತ ಬೆಳಕು ಚೆಲ್ಲುವ ಪ್ರಯತ್ನವಿದೆ.

ಯುವಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಶ್ವಾನ ಮತ್ತು ಬೆಕ್ಕು ಪ್ರದರ್ಶನಗಳು , ಸ್ಪರ್ಧೆಗಳು, ಕಂಬಳದ ಕೋಣಗಳ ಸ್ಪರ್ಧೆಗಳು ಮೂಡುಬಿದಿರೆಯಲ್ಲಿ ಜಾತ್ರೆಯ ವಾತಾವರಣವನ್ನು ಸೃಷ್ಟಿಸಿದೆ.

ADVERTISEMENT

‘ಕರ್ನಾಟಕ: ಬಹುತ್ವದ ನೆಲೆಗಳು’ ಎಂಬ ಪರಿಕಲ್ಪನೆಯೊಂದಿಗೆ ಈ ಬಾರಿಯ ನುಡಿಸಿರಿ ನಡೆಯುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಮೊದಲ ದಿನ ವಿಶೇಷೋಪನ್ಯಾಸವನ್ನು ಡಾ. ಜಿ.ಬಿ. ಹರೀಶ್‌ ‘ಜೀವನ ವಿಧಾನ– ಸಮಸ್ಯೆಗಳು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಮಾಡಲಿದ್ದಾರೆ. ಎಂ. ಗೋಪಾಲಕೃಷ್ಣ ಅಡಿಗ ಅವರಿಗೆ ಶತಮಾನದ ಸಮನವನ್ನು ವಿಮರ್ಶಕ ಎಸ್‌. ಆರ್‌. ವಿಜಯ ಶಂಕರ್‌ ಸಲ್ಲಿಸುವರು. ಮಧ್ಯಾಹ್ನ 2 ಗಂಟೆಗೆ ಜಯಪ್ಪ ಹೊನ್ನಾಳಿ ಅವರ ಕವನವಾಚನ ಬಳಿಕ ಅದೇ ಕವನವನ್ನು ಎಂ.ಎಸ್‌. ಗಿರಿಧರ್‌ ಗಾನಸಂಯೋಜನೆಯಲ್ಲಿ ಪ್ರಸ್ತುತಪಡಿಸಲಾಗುವುದು.

‘ಸಾಹಿತ್ಯ: ಆಶಯದ ನೆಲೆ’ ಎಂಬ ವಿಚಾರ ಗೋಷ್ಠಿಯಲ್ಲಿ ಡಾ. ಕೃಷ್ಣಮೂರ್ತಿ ಹನೂರು ಮತ್ತು ಆರ್‌. ತಾರಿಣಿ ಶುಭದಾಯಿನಿ ವಿಚಾರ ಮಂಡಿಸುವರು. ಕವಿಸಮಯದ ಸಂದರ್ಭ ಡಾ. ಎಂ.ಮಹಮ್ಮದ್‌ ಭಾಷಗೂಳ್ಯಂ ಅವರ ಕವನ ಪ್ರಸ್ತುತಗೊಳ್ಳಲಿದೆ.

ಬೆಳಗಾವಿ ಡಾ. ಡಿ.ಎಸ್‌. ಚೌಗಲೆ ಅವರು ‘ಚಿತ್ರಕಲೆ, ರಂಗಭೂಮಿ ಮತ್ತು ಪ್ರದರ್ಶನ ಕಲೆಯ ಬಗ್ಗೆ ವಿಶೇಷೋಪನ್ಯಾಸ ಮಾಡುವರು. ಸಂಜೆ 5.15ಕ್ಕೆ ರಂಗನಿರ್ದೇಶಕ ಕಾಸರಗೋಡು ಚಿನ್ನಾ ಅವರೊಡನೆ ಮಾತುಕತೆ ಸಾಗಲಿದೆ.

ರತ್ನಾಕರವರ್ಣಿ ವೇದಿಕೆ, ನಾಡೋಜ ಏಣಗಿ ಬಾಳಪ್ಪ ವೇದಿಕೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ದಿನವಿಡೀ ಹಾಡು, ನಾಟಕ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ ಬೆಳಿಗ್ಗೆ 11.15ಕ್ಕೆ ‘ಶಾಲಾ ಶಿಕ್ಷಣದ ಸ್ಥಿತಿಗತಿ’ ಕುರಿತು ಪ್ರೊ.ನಿರಂಜನಾರಾಧ್ಯ ವಿ.ಪಿ. ಅವರು ವಿಶೇಷ ಉಪನ್ಯಾಸ ನೀಡುವರು. ಭಾನುವಾರ ಬೆಳಿಗ್ಗೆ 9.15ಕ್ಕೆ ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಮುರಳೀಧರ ಬಳ್ಳೂಕುರಾಯ ಅವರು ವಿಶೇಷ ಉಪನ್ಯಾಸ ನೀಡುವರು. ಜತೆಗೆ ಹಲವಾರು ಇತರ ಗೋಷ್ಠಿಗಳು, ಕವಿ ಸಮಯ, ಹಿರಿಯ ಸಾಹಿತಿಗಳು, ಕಲಾವಿದರ ಸ್ಮರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.