ADVERTISEMENT

ಸಮನ್ವಯ ಸಮಿತಿ ಮನವಿಗೆ ಸ್ಪಂದಿಸಿದ ಸರ್ಕಾರ

ಇ-ಜಿಲ್ಲೆಯಲ್ಲಿ ಸ್ಥಳ-ಜಾತಿನಾಮ ವಿರೂಪ-ಅದೃಶ್ಯ!

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 6:41 IST
Last Updated 18 ಜೂನ್ 2013, 6:41 IST

ಕಾಸರಗೋಡು: ಸ್ಥಳನಾಮ ಮತ್ತು ಜಾತಿನಾಮಗಳು ಇ-ಜಿಲ್ಲೆ ಆನ್‌ಲೈನ್ ಆಡಳಿತ ವ್ಯವಸ್ಥೆಯಲ್ಲಿ ವಿರೂಪಗೊಂಡಿದೆ ಎಂದು ಕಾಸರಗೋಡಿನ `ಸಮನ್ವಯ ಸಮಿತಿ' ಕಳೆದ ವಾರ ಮುಖ್ಯಮಂತ್ರಿಯವರ ಸಮಸ್ಯೆ ಪರಿಹಾರ ಸೆಲ್‌ಗೆ ಕಳುಹಿಸಿದ ಮನವಿಗೆ ಸರ್ಕಾರ ಸ್ಪಂದಿಸಿದೆ.

ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸೆಲ್, ಸೂಕ್ತವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಕಾಸರಗೋಡು ಕಂದಾಯ ಅಧಿಕಾರಿಗೆ ಆದೇಶಿಸಿದೆ.

ಇ-ಜಿಲ್ಲೆ ಯೋಜನೆ ಜನಸಾಮಾನ್ಯರಿಗೆ ಲಭ್ಯವಾಗುವ ಮೊದಲೇ `ಪ್ರಜಾವಾಣಿ' ವರದಿ ಪ್ರಕಟಿಸಿ ಜನರ ಗಮನ ಸೆಳೆದಿತ್ತು. ಸಂಘಟನೆಗಳು ತಡವಾಗಿ ಎಚ್ಚೆತ್ತುಕೊಂಡರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಳೆದ ವಾರ ಕಂದಾಯ ಅಧಿಕಾರಿಗಳು ಮತ್ತು ಅಕ್ಷಯ ಕೇಂದ್ರದ ಜಂಟಿ ಸಭೆಯಲ್ಲಿ ಕನ್ನಡಿಗ ಕಂದಾಯ ಅಧಿಕಾರಿಗಳು ಸ್ಥಳನಾಮ ಮತ್ತು ಜಾತಿ ನಾಮದ ಗೊಂದಲದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದರು.

ಕೇರಳ ಸರ್ಕಾರದ ಇ-ಜಿಲ್ಲೆ ಯೋಜನೆಯಲ್ಲಿ ಕಾಸರಗೋಡಿನ ಸ್ಥಳನಾಮ ಮತ್ತು ಜಾತಿನಾಮಗಳು ವಿರೂಪ ಮತ್ತು ಅದೃಶ್ಯವಾಗಿದೆ. ಈ ತಪ್ಪುಗಳು ಜನಸಾಮಾನ್ಯರ ಗಮನಕ್ಕೆ ನೇರವಾಗಿ ಬರುತ್ತಿಲ್ಲ. ಅಕ್ಷಯ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಕೈಗೆ ಸಿಗುವಾಗ ಇ-ಜಿಲ್ಲೆಯ ಕಾರ್ಯವೈಖರಿ ಮನದಟ್ಟಾಗುತ್ತದೆ. ಕನ್ನಡಿಗರನ್ನು ಈ ಯೋಜನೆಯಲ್ಲಿ ಸರ್ಕಾರ ಬಳಸಿಕೊಳ್ಳದ ಕಾರಣ ಇಂಥ ಗೊಂದಲ ತಲೆದೋರಿದೆ ಎನ್ನುತ್ತಾರೆ ಸಮನ್ವಯ ಸಮಿತಿಯ ಕಾರ್ಯಕರ್ತ ನರೇಶ್ ಮುಳ್ಳೇರಿಯ.

ಬದಲಾದ ಸ್ಥಳನಾಮಗಳು: ಬೇಡಡ್ಕ (ಬೇಡಡುಕ), ಬಡಾಜೆ (ಬೆಡಾಜೆ), ಬೇಕೂರು (ಬೆಕ್ಕೂರು), ಬಂದಡ್ಕ (ಬೆಂದಡುಕ್ಕ), ಬಂಗ್ರಮಂಜೇಶ್ವರ (ಬೆಂಕ್ರಮಂಚೇಶ್ವರ್), ಇಚ್ಲಂಗೋಡು (ಇಚ್ಚಿಲಮ್‌ಗೋಡ್), ಕಾಟುಕುಕ್ಕೆ (ಕಾಟುಕುಕ್ಕೈ), ಕೊಡ್ಲಮೊಗರು (ಕುಡ್ಲಮೊಗರು), ಕುಂಬ್ಡಾಜೆ (ಕುಂಬಡಾಜೆ), ಮೀಂಜ (ಮೀಂಚ), ಮುಳಿಂಜ (ಮುಳಿಂಚ), ಪೈವಳಿಕೆ (ಪೈವಳಿಕೈ), ಪುತ್ತಿಗೆ (ಪುತ್ತಿಗೈ) ಮೊದಲಾದ ಸ್ಥಳನಾಮಗಳು ವಿರೂಪಗೊಂಡಿವೆ.

ಮಾಯವಾದ ಜಾತಿ-ಉಪಜಾತಿಗಳು: ಬಂಟ, ಮೂಲ್ಯ, ರೋಮನ್ ಕ್ಯಾಥಲಿಕ್ ಮೊದಲಾದ ಜಾತಿಗಳು ಮಾಯವಾಗಿದೆ! ಶೈಕ್ಷಣಿಕ ಮತ್ತಿತರ ಸೌಲಭ್ಯಗಳಿಗೆ ನೀಡಲಾಗುವ ಪ್ರಮಾಣಪತ್ರವಾಗಿರುವ `ಇತರ ಅರ್ಹ ಜಾತಿ(ಒ.ಇ.ಸಿ.) ಪ್ರಮಾಣ ಪತ್ರದ ವಿಭಾಗವೇ ಇಲ್ಲ! ಇದರಿಂದ ಈ ವಿಭಾಗದ ವಿದ್ಯಾರ್ಥಿಗಳ ಸಂಕಷ್ಟ ಹೇಳತೀರದು.

ಚಾಕ್ಕಮಾರ್, ಪೆರುವಣ್ಣನ್, ಪುಳ್ಳುವನ್, ಟಚ್ಚಾರ್, ವರ್ಣವನ್, ಮಾದಿಗ, ಚೆಮ್ಮಾನ್, ಕುಡುಂಬಿ, ದೀವರ, ಕುಶವನ್ ಜಾತಿ ಮತ್ತು ಹತ್ತಕ್ಕೂ ಅಧಿಕ ಉಪಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳ ಶಾಲಾ-ಕಾಲೇಜು ಪ್ರವೇಶಾತಿ ಮತ್ತು ವಿದ್ಯಾರ್ಥಿ ವೇತನಗಳಿಗೆ ಕತ್ತರಿ ಬೀಳಲಿದೆ. ಇವರಿಗೆ ಒ.ಇ.ಸಿ. ಪ್ರಮಾಣ ಪತ್ರದ ಬದಲು ಒ.ಬಿ.ಸಿ.(ಇತರ ಹಿಂದುಳಿದ ಜಾತಿ) ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ.

ನೆಲೆ ತಪ್ಪಿದ ಮರಾಠಿ ಸಮುದಾಯ: ಪರಿಶಿಷ್ಟ ಜಾತಿಯ ಸೌಲಭ್ಯವಂಚಿತರಾದ ಮರಾಠಿ ನಾಯ್ಕ ಸಮುದಾಯದವರನ್ನು ಒ.ಇ.ಸಿ. ವಿಭಾಗಕ್ಕೆ ಸೇರಿಸಲಾಗಿತ್ತು. ಈ ವಿಭಾಗವೇ ನಾಪತ್ತೆಯಾದ ಕಾರಣ ಮರಾಟಿ ನಾಯ್ಕ ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಕ್ಕೆ ಕೊಡಲಿಯೇಟು ಬಿದ್ದಿದೆ. ಈ ಸಮುದಾಯಕ್ಕೆ ಸರ್ಕಾರದಿಂದ ಲಭಿಸಿದ ಎರಡನೇ ಮಹಾ ಆಘಾತ! ಉಳಿದ ಒ.ಇ.ಸಿ. ಅರ್ಹತೆ ಇರುವ ಸಮುದಾಯಗಳ ಹೆಸರು ಒ.ಬಿ.ಸಿ. ವಿಭಾಗದಲ್ಲಿದ್ದು, ಅವರು ಇ-ಯೋಜನೆಯಿಂದ ಒ.ಇ.ಸಿ. ಸೌಲಭ್ಯದಿಂದ ವಂಚಿತರಾಗಿ ಒ.ಬಿ.ಸಿ. ಬಡ್ತಿ ಪಡೆದಿದ್ದಾರೆ!

ಮಲಯಾಳೀಕರಣದ ಅಂಗವಾಗಿಯೇ ಕಾಸರಗೋಡಿನ ತುಳು-ಕನ್ನಡ ಸಂಸ್ಕೃತಿಯ ಸ್ಥಳನಾಮಗಳು ವಿರೂಪಗೊಂಡಿದೆ. ಈಗ `ಇ-ಜಿಲ್ಲೆ'ಯೆಂಬ ಆನ್‌ಲೈನ್ ಆಡಳಿತ ವೈಖರಿಯಿಂದ ಸ್ಥಳೀಯ ಜಾತಿನಾಮಗಳು ಕೈಬಿಟ್ಟು ಹೋಗಿದೆ ಹಾಗೂ ವಿರೂಪಗೊಂಡಿದೆ.
 

ಇದನ್ನು ಸರಿಪಡಿಸಲು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಆಗುವ ಅನಾಹುತ ಗಂಭೀರವಾದುದು. ಜಾತಿ ಪ್ರಮಾಣ ಪತ್ರದಲ್ಲಿ ಸಲ್ಲದ ಜಾತಿಯನ್ನು ಅಕ್ಷಯ ಕೇಂದ್ರಗಳು ದಾಖಲಿಸಿ ವಿತರಿಸಿದರೆ ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗುತ್ತದೆ. ಸರ್ಕಾರ ಮಾಡಿದ ತಪ್ಪಿಗೆ ಜನಸಾಮಾನ್ಯರೇ ಹೊಣೆಗಾರರಾಗುತ್ತಿದ್ದು, ಇದರ ತಿದ್ದುಪಡಿಗೆ ಅವರೇ `ಬೆಲೆ' ನೀಡುವ ಪ್ರಸಂಗ ಎದುರಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT