ADVERTISEMENT

ಸಮರೋಪಾದಿ ಕಾರ್ಯಾಚರಣೆ-ಟ್ಯಾಂಕರ್ ಕಂಡರೆ ಭಯ

ಕಂಡ ಕಂಡಲ್ಲಿ ನೀರಿಗಾಗಿ ಹುಡುಕಾಟ, ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಅಡುಗೆಯಿಲ್ಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:28 IST
Last Updated 10 ಏಪ್ರಿಲ್ 2013, 8:28 IST

ಉಪ್ಪಿನಂಗಡಿ: ಸಮೀಪದ ಪೆರ್ನೆಯಲ್ಲಿ ಎಲ್‌ಪಿಜಿ ಅನಿಲ ಸಾಗಿಸುವ ಟ್ಯಾಂಕರ್ ಉರುಳಿ ಸಂಭವಿಸಿದ ಅಗ್ನಿ ದುರಂತ. ರಾಷ್ಟ್ರೀಯ ಹೆದ್ದಾರಿ ಆಸುಪಾಸಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಈ ಹೆದ್ದಾರಿಯಲ್ಲಿ ನಿತ್ಯ ನೂರಾರು ಟ್ಯಾಂಕರ್‌ಗಳು ಸಂಚರಿಸುತ್ತವೆ. ಒಂದು ಟ್ಯಾಂಕರ್ ಪಲ್ಟಿ ಹೊಡೆದರೆ ಸಂಭವಿಸಬಹುದಾದ ದುರಂತದ ತೀವ್ರತೆ ಎಷ್ಟಿರಬಹುದು ಎಂಬ ಸತ್ಯದ ಕರಾಳ ಮುಖವನ್ನು ಈ ದುರಂತ ತೋರಿಸಿಕೊಟ್ಟಿದೆ.

ಇಂತಹ ದುರಂತವನ್ನು ಎದುರಿಸಲು ಜಿಲ್ಲಾಡಳಿತದ ಬಳಿ ಹಾಗೂ ಅನಿಲ ಪೂರೈಸುವ ಕಂಪೆನಿಗಳು ಯಾವುದೇ ಸನ್ನದ್ಧತೆ ಹೊಂದಿರದಿರುವುದೂ ಹೆದ್ದಾರಿ ಆಸುಪಾಸಿನ ನಿವಾಸಿಗಳ ಆತಂಕಕ್ಕೆ ಕಾರಣ.

ಅಗ್ನಿ ದುರಂತ ಸಂಭವಿಸಿದಾಗ ಸ್ಥಳೀಯರು ಏನು ಮಾಡಬೇಕೆಂದೇ ತೋಚದ ಸ್ಥಿತಿಯಲ್ಲಿದ್ದರು. ಟ್ಯಾಂಕರ್ ಪಲ್ಟಿ ಹೊಡೆದು ಬೆಂಕಿ ಹತ್ತಿದ್ದ ಘಟನೆಯ ಸುದ್ದಿ ಹರಡುತ್ತಿದ್ದಂತೆ ಪೆರ್ನೆ, ಕರ‌್ವೇಳ್, ಉಪ್ಪಿನಂಗಡಿ ಪರಿಸರದ ಯುವಕರು ಆಗಮಿಸಿ ತಂಡೋಪತಂಡವಾಗಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. 15 ಕಿ.ಮೀ. ದೂರದ ಪುತ್ತೂರಿನಿಂದ ಹಾಗೂ 20 ಕಿ.ಮೀ. ದೂರದ ಬಿ.ಸಿ.ರೋಡ್‌ನಿಂದ ಅಗ್ನಿಶಾಮಕ ವಾಹನಗಳು ಆಗಮಿಸಬೇಕಿತ್ತು. ಅಂಬುಲೆನ್ಸ್, ಪೊಲೀಸರು ಮತ್ತು ಅಗ್ನಿ ಶಾಮಕ ಸ್ಥಳಕ್ಕೆ ಬರುವ ಮುನ್ನ ಸ್ಥಳೀಯ ಯುವಕರು ಜೀವದ ಹಂಗು ತೊರೆದು ಬೆಂಕಿಯಲ್ಲಿ ಉರಿಯುತ್ತಿದ್ದ ಮನೆಯೊಳಗೆ ಇದ್ದವರನ್ನು ಹೊರಕ್ಕೆ ತಂದು ಆಸ್ಪತ್ರೆಗೆ ಸಾಗಿಸಿ ಸಂಭವನೀಯ ಹೆಚ್ಚಿನ ಸಾವು-ನೋವು ತಪ್ಪಿಸ್ದ್ದಿದರು.

ನೀರಿಗೆ ಹಾಹಾಕಾರ: ಎಲ್‌ಪಿಜಿ ವ್ಯಾಪಿಸಿದ್ದಲ್ಲೆಲ್ಲಾ ಚಾಚುತ್ತಿದ್ದ ಬೆಂಕಿಯ ಕೆನ್ನಾಲೆಯನ್ನು ಆರಿಸಲು ಸಾಕಷ್ಟು ನೀರು ಲಭ್ಯ ಇಲ್ಲದೆ ಅಗ್ನಿಶಾಮಕ ಪಡೆಯವರು ಪರದಾಡಬೇಕಾಯಿತು.  ಪ್ರಾರಂಭದಲ್ಲಿ  ಅಗ್ನಿಶಾಮಕ ದಳದ ಎರಡು ವಾಹನಗಳೂ ಮಾತ್ರ ಆಗಮಿಸಿದ್ದವು. ಅವರು ಸುಮಾರು 5 ಕಿ. ಮೀ. ದೂರದಿಂದ ನೇತ್ರಾವತಿ ನದಿಯಿಂದ ನೀರು ತರಬೇಕಾಗಿತ್ತು. ಆದರೆ ನದಿಯಲ್ಲಿ ನೀರಿನ ಕೊರತೆ ಎದುರಾಗಿತ್ತು. ಬಳಿಕ ಇನ್ನೂ 4 ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ನದಿ ನೀರಿನ ಸಮಸ್ಯೆಯನ್ನು ಮನಗಂಡು ಎಲ್ಲೆಡೆ ನೀರಿಗಾಗಿ ಹುಡುಕಾಟಡಿದರು.

ಬಾವಿ ಕಡೆಗೆ ಅಗ್ನಿಶಾಮಕ ಟ್ಯಾಂಕರ್: ಎಷ್ಟು ಆರಿಸಿದರೂ ತಣ್ಣಗಾಗದ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು.  ಒಂದೆಡೆ ಬೆಂಕಿ ಜ್ವಾಲೆ ಆರಿಸಿದರೆ, ಇನ್ನೊಂದು ಕಡೆಯಿಂದ ಜ್ವಾಲೆಗಳು ಮತ್ತಷ್ಟು ವ್ಯಾಪಿಸುತ್ತಿದ್ದವು.  ಬಳಿಕ ಸಾರ್ವಜನಿಕರು ಮುಂದಾಗಿ ಬಂದು ಊರಿನಲ್ಲಿ ಇರುವ ಬಾವಿಯ ಮಾಹಿತಿ ನೀಡುತ್ತಾ, ಬಾವಿ ಇರುವ ಕಡೆಗೆ ಅಗ್ನಿ ಶಾಮಕ ದಳದ ಟ್ಯಾಂಕರ್‌ನ್ನು ಕರೆದೊಯ್ದು, ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿ ಬೆಂಕಿ ನಂದಿಸುವಲ್ಲಿ ಕೈಜೋಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.