ADVERTISEMENT

ಸಮಸ್ಯೆಗಳಿಗೆಲ್ಲ ಸರ್ಕಾರವೇ ಪರಿಹಾರವಲ್ಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2011, 8:35 IST
Last Updated 10 ಆಗಸ್ಟ್ 2011, 8:35 IST
ಸಮಸ್ಯೆಗಳಿಗೆಲ್ಲ ಸರ್ಕಾರವೇ ಪರಿಹಾರವಲ್ಲ
ಸಮಸ್ಯೆಗಳಿಗೆಲ್ಲ ಸರ್ಕಾರವೇ ಪರಿಹಾರವಲ್ಲ   

ಕುಂದಾಪುರ: ನಮ್ಮಲ್ಲಿನ ಸಮಸ್ಯೆಗಳಿಗೆ ಸರ್ಕಾರವೇ ಪರ್ಯಾಯ ಪರಿಹಾರವಲ್ಲ. ವಿಧಾನಸೌಧ ಮಾತ್ರ ಸರ್ಕಾರ ಎನ್ನುವ ಚಿಂತನೆ ಸರಿಯಲ್ಲ, ನಾವು ಕೂಡ ಪ್ರಜಾತಂತ್ರ ವ್ಯವಸ್ಥೆಯ ಸರ್ಕಾರದ ಪಾಲುದಾರರು ಎನ್ನುವ ಪ್ರಜ್ಞೆ ಪ್ರತಿಯೊಬ್ಬನಲ್ಲೂ ಮೂಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಎಂ.ಟಿ ರೇಜೂ ಹೇಳಿದರು.

ಅವರು ಮಂಗಳವಾರ ಸ್ಥಳೀಯ ಭಂಡಾರ್‌ಕಾರ್ಸ್‌ ಕಾಲೇಜಿನ ಕೋಯಾಕುಟ್ಟಿ ಸಭಾಂಗಣದಲ್ಲಿ  ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನ (ರಿ) ಉದ್ಘಾಟಿಸಿ ಮಾತನಾಡಿದರು.

ಕರಾವಳಿಯ ಜಿಲ್ಲೆಗಳಲ್ಲಿ ಕೃಷಿ ಭೂಮಿ ಪ್ರಮಾಣ ಕಡಿಮೆ. ಹೆಚ್ಚಿನ ಕೃಷಿ ಭೂಮಿ ಕೃಷಿಯೇತರ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದೆ. ಈ ರೀತಿಯ ಪರಿವರ್ತನೆಗಳು ಹೆಚ್ಚಾದಾಗ ಮುಂದಿನ ದಿನಗಳಲ್ಲಿ ಏನಾಗಬಹುದು ಎನ್ನುವ ಸಾಮಾನ್ಯ ಗ್ರಹಿಕೆ ನಮ್ಮಲ್ಲಿ ಮೂಡಬೇಕು ಎಂದು ಅವರು ಹೇಳಿದರು.

2011 ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಬದಲಾವಣೆಯ ವರ್ಷವಾಗಬೇಕು. ಯುವ ಪತ್ರಕರ್ತರಲ್ಲಿ ತತ್ವನಿಷ್ಠ ಹಾಗೂ ವೃತ್ತಿ ಬದ್ದತೆ ಬೆಳೆಯಬೇಕು ಎಂದರು.

`ಪ್ರಜಾವಾಣಿ~ ಯ ಸಹಾಯಕ ಸಂಪಾದಕ ದಿನೇಶ್ ಅಮೀನ್ ಮಟ್ಟು ಮಾತನಾಡಿ,  ಪತ್ರಿಕಾ ರಂಗದಲ್ಲಿ ಇಂದು ಕಾಣುತ್ತಿರುವ ಬದಲಾವಣೆಗಳನ್ನು 27 ವರ್ಷಗಳ ಹಿಂದೆಯೇ ಕಲ್ಪಿಸಿಕೊಂಡು ಆ ದಿಸೆಯಲ್ಲಿಯೆ ಕಾರ್ಯಪ್ರವೃತ್ತರಾಗಿದ್ದ ಅಪರೂಪದ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಎಂದು ಹೇಳಿದರು.

ಓದುಗನನ್ನೆ ಪತ್ರಿಕೆಯ ಒಡೆಯನನ್ನಾಗಿಸಬೇಕು ಎಂಬುದು ಅವರ ಚಿಂತನೆಯಾಗಿತ್ತು. ವಡ್ಡರ್ಸೆ ಅವರು ತಮ್ಮ ಬದುಕಿನ ದಿನಗಳಲ್ಲಿ ಅವರ ಕುಟುಂಬಕ್ಕೆ ನೀಡಿದ ಕೊಡುಗೆಗಿಂತ ಪತ್ರಿಕಾರಂಗದ ಸಹವರ್ತಿಗಳಿಗಾಗಿ ನೀಡಿದೆ ಕೊಡುಗೆಯೇ ಹೆಚ್ಚಿತ್ತು ಎಂದು ಅವರು ವಿಶ್ಲೇಷಿಸಿದರು.

ಉದ್ಯಮಿಗಳ ಕೈಯಲ್ಲಿ ಇದ್ದ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಇಂದು ರಾಜಕಾರಣಿಗಳ ಕೈವಶ ಆಗುತ್ತಿವೆ. ಮಾಧ್ಯಮ ರಂಗ ಕಾಣುತ್ತಿರುವ ಹಲವಾರು ಅನಿಶ್ಚಿತತೆ ಹಾಗೂ ಬಿಕ್ಕಟ್ಟುಗಳಿಗೆ ಏಕಮಾತ್ರ ಪರಿಹಾರ ಸೂತ್ರವೆಂದರೆ ವಡ್ಡರ್ಸೆ ಅವರು ಅಂದು ಕಂಡ ತತ್ವನಿಷ್ಠ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸರಳ ಪತ್ರಿಕೋದ್ಯಮವನ್ನು ಅನುಸರಿಸುವುದಾಗಿದೆ ಎಂದು ಅವರು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕೆ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಡ್ಡರ್ಸೆ ಅವರ  ಪುತ್ರ ಮುರಳೀಧರ ಶೆಟ್ಟಿ ವೇದಿಕೆಯಲ್ಲಿದ್ದರು.

ಪತ್ರಕರ್ತರಾದ ಚಿದಂಬರಂ ಬೈಕಂಪಾಡಿ, ಎಸ್.ಜನಾರ್ದನ್, ಪ್ರತಿಷ್ಠಾನದ ಖಜಾಂಜಿ ವಡ್ಡರ್ಸೆ ನವೀನ್ ಶೆಟ್ಟಿ, ಕೆಂಚನೂರು ಕಿಶನ್ ಶೆಟ್ಟಿ, ಮಾಲಿನಿ ಸತೀಶ್, ಸುಬ್ರಮಣ್ಯ ಪಡುಕೋಣೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.