ADVERTISEMENT

ಸಮಾಜದಲ್ಲಿ ಪ್ರಾಮಾಣಿಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 8:55 IST
Last Updated 18 ಜುಲೈ 2012, 8:55 IST

ಮೂಡುಬಿದಿರೆ: ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ರಿಕ್ಷಾಚಾಲಕರಿಗೆ ಸಮಾಜದಲ್ಲಿ ಗೌರವ ಇದ್ದೇ ಇರುತ್ತದೆ~ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್ ಹೇಳಿದರು.ಇಲ್ಲಿನ ಬಿಲ್ಲವ ಸಂಘದಲ್ಲಿ ಮಂಗಳವಾರ ನಡೆದ ರಿಕ್ಷಾ ಮಾಲಕ ಚಾಲಕರ ಸಂಘದ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೂರು ದಶಕಗಳ ಹಿಂದೆ ಸ್ವಂತ ರಿಕ್ಷಾ ಖರೀದಿಸುವುದು ಎಲ್ಲರಿಗೂ ಸಾಧ್ಯವಿರಲಿಲ್ಲ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಸಾಲಮೇಳ ಯೋಜನೆಯನ್ನು ಜಾರಿಗೆ ತಂದ ಫಲವಾಗಿ ಜನಸಾಮಾನ್ಯರು ಕೂಡ ಬ್ಯಾಂಕ್ ಸಾಲ ಮಾಡಿ ರಿಕ್ಷಾ ಖರೀದಿಸಿ  ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಯಿತು.
 
ನಂತರ ಸರ್ಕಾರ ರಿಕ್ಷಾ ಚಾಲಕರಿಗೆ ಪರವಾನಗಿ ನೀಡುವುದರಲ್ಲಿ ಸಡಿಲಿಕೆ ತೋರಿದರಿಂದ ಇಂದು ಪ್ರತಿ ಗ್ರಾಮಗಳಲ್ಲೂ ಬಾಡಿಗೆ ರಿಕ್ಷಾಗಳ ಸೇವೆ ಲಭಿಸುವಂತಾಗಿದೆ. ರಿಕ್ಷಾಗಳು ಜನಸಾಮಾನ್ಯರ ಸೇವಾ ವ್ಯವಸ್ಥೆ ಇದ್ದಂತೆ. ರಿಕ್ಷಾ ಚಾಲಕರು ಉದ್ಧಟತನ ಬಿಟ್ಟು ಶಿಸ್ತು ಹಾಗೂ ಉತ್ತಮ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋದಾಗ ಸಾರ್ವಜನಿಕರೂ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳುತ್ತಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ  ಮಲ್ಲಿಕಾರ್ಜುನ ಮಾತನಾಡಿ, ಆಟೊ ರಿಕ್ಷಾ ಚಾಲಕ ಪರಿಹಾರ ನಿಧಿಯ ಸದಸ್ಯತ್ವ ಪಡೆದುಕೊಂಡ ರಿಕ್ಷಾ ಚಾಲಕರು 50 ಸಾವಿರ ರೂಪಾಯಿ ಅಪಘಾತ ವಿಮಾ ಪರಿಹಾರ ಪಡೆದುಕೊಳ್ಳಲು ಅರ್ಹರು. ಎಲ್‌ಪಿಜಿ 4ಸ್ಟ್ರೋಕ್ ರಿಕ್ಷಾ ಖರೀದಿಸಿದರೆ 15 ಸಾವಿರ ರೂಪಾಯಿ ಸಹಾಯಧನ ಸಿಗುತ್ತದೆ. ರಿಕ್ಷಾ ಚಾಲಕರು ಇದರ ಸದುಪಯೋಗಪಡಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಅಮರನಾಥ ಶೆಟ್ಟಿ ಇದೇ ಸಂದರ್ಭದಲ್ಲಿ ಹಿರಿಯ 25 ರಿಕ್ಷಾ ಚಾಲಕರನ್ನು ಸನ್ಮಾನಿಸಿದರು. ಸಂಘದ ಸದಸ್ಯರಾದ ಅಬ್ದುಲ್ಲಾ ಮತ್ತು ಅಬ್ದುಲ್ ರಝಾಕ್ ಅವರ ವೈದ್ಯಕೀಯ ನೆರವಿಗೆ ಆರ್ಥಿಕ ಸಹಾಯ ನೀಡಲಾಯಿತು.

ಮೂಡಾ ಅಧ್ಯಕ್ಷ ಬಾಹುಬಲಿ ಪ್ರಸಾದ್, ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ, ವಕೀಲ ಎಂ.ಎಸ್.ಕೋಟ್ಯಾನ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ದಿವಾಕರ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ಕಾರ್ಯದರ್ಶಿ  ಪ್ರದೀಪ್ ರೈ, ಸಂಘದ ಅಧ್ಯಕ್ಷ ಪ್ರಶಾಂತ ಅಂಚನ್, ಕಾರ್ಯದರ್ಶಿ ರಾಜೇಶ್ ಸುವರ್ಣ ಇದ್ದರು. ನಾರಾಯಣ ರಾವ್ ಸ್ವಾಗತಿಸಿದರು.
ಸಾನೂರು ಸತೀಶ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.