ADVERTISEMENT

ಸಹೃದಯರ ಋಣ ಸಂದಾಯ ಅಸಾಧ್ಯ

ಸನ್ಮಾನ ಸ್ವೀಕರಿಸಿ ಭಾವುಕರಾದ ವಿದ್ವಾಂಸ ಎ. ಈಶ್ವರಯ್ಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 5:40 IST
Last Updated 13 ಆಗಸ್ಟ್ 2016, 5:40 IST
ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಶುಕ್ರವಾರ ಹಿರಿಯ ವಿದ್ವಾಂಸ ಈಶ್ವರಯ್ಯ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಶುಕ್ರವಾರ ಹಿರಿಯ ವಿದ್ವಾಂಸ ಈಶ್ವರಯ್ಯ ಅವರನ್ನು ಸನ್ಮಾನಿಸಲಾಯಿತು.   

ಮಂಗಳೂರು: ತಾಯಿ ಋಣ, ಪಿತೃಋಣ, ಆಚಾರ್ಯ ಋಣಕ್ಕಿಂತಲೂ ಸಹೃದಯರ ಋಣ ದೊಡ್ಡದು ಎಂದು ಹಿರಿಯ ವಿದ್ವಾಂಸ ಎ. ಈಶ್ವರಯ್ಯ ಹೇಳಿದರು. ಈಶ್ವರಯ್ಯ ಅವರ ಹುಟ್ಟುಹಬ್ಬ ಸಂದರ್ಭದಲ್ಲಿ  ಸನಾತನ ನಾಟ್ಯಾಲಯ, ಮಣಿಕೃಷ್ಣ ಸ್ವಾಮಿ ಅಕಾಡೆಮಿ ಮತ್ತು ಭಾರತೀಯ ವಿದ್ಯಾಭವನದ ವತಿಯಿಂದ ಸನಾತನ ನಾಟ್ಯಾಲಯದಲ್ಲಿ ಶುಕ್ರವಾರ ನಡೆದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಂದೆ ತಾಯಿ ಮತ್ತು ಗುರುಗಳು ನಮಗೇನಾದರೂ ಒಳಿತು ಮಾಡಿದರೆ ಅದರಲ್ಲಿ ಸಣ್ಣ ಪ್ರಮಾಣದ ಸ್ವಹಿತ ಇರಬಹುದೇನೋ. ನನ್ನ ಮಗುವೆಂದೋ ಅಥವಾ ನನ್ನ ಶಿಷ್ಯ ಎಂಬ ಭಾವನೆಯೂ ಇರಬಹುದು. ಆದರೆ ಸಹೃಯರು ಮಾಡುವ ಸನ್ಮಾನ, ತೋರಿಸುವ ಪ್ರೀತಿಯ ಹಿಂದೆ ನಿಷ್ಕಲ್ಮಷ ಭಾವನೆ ಇರುತ್ತದೆ. ಅದಕ್ಕೆ ಪ್ರತಿಯಾಗಿ ಋಣ ಸಂದಾಯ ಮಾಡುವುದು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಅಭಿನಂದನ ಭಾಷಣ ಮಾಡಿದ ಕರಾವಳಿ ನೃತ್ಯ ಕಲಾ ಪರಿಷತ್‌ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್‌ ಈಶ್ವರಯ್ಯ ಅವರು ಔಚಿತ್ಯ ಪ್ರಜ್ಞೆಯುಳ್ಳ ಹಿರಿಯ ವಿದ್ವಾಂಸ ರಾಗಿ ಕರಾವಳಿಯ ಕಲಾಪ್ರತಿಭೆಗಳನ್ನು ಪೋಷಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಶಾಸಕ ಗಣೇಶ್‌ ಕಾರ್ಣಿಕ್‌, ಕದ್ರಿ ಗೋಪಾಲನಾಥ್‌, ಹರಿಕೃಷ್ಣ ಪುನರೂರು, ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ರಾವ್‌, ಜಿ.ಆರ್‌. ರೈ, ನಾಗೇಶ್‌ ಎ. ಬಪ್ಪನಾಡು, ಗಣೇಶ್‌ ಸೋಮಯಾಜಿ ಮತ್ತಿತರರು ಇದ್ದರು.

ಮಿಶೆಲ್‌ಗೆ ಸನ್ಮಾನ
ಕೇಂದ್ರ ಸರ್ಕಾರ 2015ರಲ್ಲಿ ನಡೆಸಿದ ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಪರೀಕ್ಷೆಯಲ್ಲಿ 387ನೇ ಸ್ಥಾನದೊಂದಿಗೆ ತೇರ್ಗಡೆಯಾದ ನೀರುಡೆಯ ನಿವಾಸಿ ಮಿಶೆಲ್‌ ಕ್ಯೀನಿ ಡಿ’ಕಾಸ್ಟಾ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.  ಬಳಿಕ ಪ್ರಾರ್ಥನಾ ಸಾಯಿ ನರಸಿಂಹನ್‌ ಅವರಿಂದ ಹಾಡುಗಾರಿಕೆ ನಡೆಯಿತು. ತಿರುವಿಳಾ ವಿಜು ಎಸ್‌. ಆನಂದ್‌ ವಯಲಿನ್‌ನಲ್ಲಿ ಮತ್ತು ಮಹೇಶ್‌ ಕುಮಾರ್‌ ಪಾಲಕ್ಕಾಡ್‌ ಮೃದಂಗದಲ್ಲಿ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.