ADVERTISEMENT

ಸುಬ್ರಹ್ಮಣ್ಯ- ಕೋಡಿಕಜೆ ರಸ್ತೆಗೆ ತಡೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:36 IST
Last Updated 4 ಏಪ್ರಿಲ್ 2013, 8:36 IST

ಸುಬ್ರಹ್ಮಣ್ಯ: ಮಲೆಕುಡಿಯ ಜನಾಂಗದವರ ಕಾಲೊನಿಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯನ್ನು ಮುಚ್ಚುವಂತೆ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರಿ ಸಂಪರ್ಕಕ್ಕೆ ಅಡ್ಡಿ ಮಾಡಿರುವ ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ, ಉಪಾಧ್ಯಕ್ಷ ಶಿವರಾಮ ರೈ ಮತ್ತು ಇಬ್ಬರು ಸದಸ್ಯರು ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಲೆಕುಡಿಯ ರಸ್ತೆ ಹೋರಾಟ ಸಮಿತಿ ಎಚ್ಚರಿಸಿದೆ.

ಸುಬ್ರಹ್ಮಣ್ಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆಕುಡಿಯ ರಸ್ತೆ ಹೋರಾಟ ಸಮಿತಿ  ಅಧ್ಯಕ್ಷ ಕೆ.ಎಲ್.ಸುಬ್ರಹ್ಮಣ್ಯ ಮತ್ತು ಸಮಿತಿಯ ಮುಖಂಡ ಮೋನಪ್ಪ ಮಾನಾಡು ಮಾತನಾಡಿ 1906ಕ್ಕಿಂತ  ಮೊದಲು ಅರಣ್ಯ ಕಂದಾಯ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಮತ್ತು ಅರಣ್ಯ ಇಲಾಖೆ ನಕ್ಷೆಯಲ್ಲಿ ಗುರುತಿಸಿರುವ, ತಲೆತಲಾಂತರದಿಂದ ಸುಬ್ರಹ್ಮಣ್ಯ ಕೋಡಿಕಜೆ-ಕಲ್ಲಜಡ್ಕ, ನೂಜಿಬೆಟ್ಟುವಿನ ರಸ್ತೆ ಉರ್ಜಿತದಲ್ಲಿತ್ತು.

ಇದನ್ನು ಮುಚ್ಚುವಂತೆ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರಿರುವುದು ಮತ್ತು ಇಲಾಖೆ ಅಧಿಕಾರಿಗೆ ಈ ಕಾಲೊನಿಗೆ ಬೇರೆ ರಸ್ತೆ ಇದೆ ಎಂದು ಸುಳ್ಳು ಮಾಹಿತಿ ನೀಡಿ ಸಂಪರ್ಕಕ್ಕೆ ಅಡ್ಡಿ ಮಾಡಿರುವುದು ಖಂಡನೀಯ ಎಂದರು.
ಕಾನೂನುಬದ್ಧ ಹಕ್ಕಾದ ರಸ್ತೆ ಒದಗಿಸಬೇಕಾದ ಚುನಾಯಿತ ಜನಪ್ರತಿನಿಧಿಗಳು ಈ ರೀತಿ ವರ್ತಿಸಿರುವುದು ಸರಿಯಲ್ಲ. ಇದು ಜನತೆಗೆ ಮಾಡಿದ ದ್ರೋಹ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಸದಸ್ಯರಾದ ದೇಜಪ್ಪ ಮಲೆ, ಗುಂಡಪ್ಪ ಮಲೆ, ಚಂದ್ರಶೇಖರ, ಅಪ್ಪಯ್ಯ, ಶಿವಪ್ಪ ಮಲೆ, ಜಯಪ್ರಕಾಶ್ ಕೂಜುಗೋಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT