ADVERTISEMENT

ಸುಳ್ಯ: ಬಯಲಿನಲ್ಲಿ ಹೊಂಡ ತೆಗೆದರು; ಮುಚ್ಚಿದರು!

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 7:35 IST
Last Updated 14 ಜೂನ್ 2012, 7:35 IST

ಸುಳ್ಯ: ಚೆನ್ನಕೇಶವ ದೇವಸ್ಥಾನದ ಎದುರಿನ ಅಂಗಳದಲ್ಲಿ ಇಂಟರ್‌ಲಾಕ್ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಕಳೆದ ವಾರ ಹೊಂಡ ತೆಗೆದಿದ್ದು, ಅದನ್ನು ಸ್ಥಳೀಯ ಪಟ್ಟಣ ಪಂಚಾಯಿತಿಯವರು ಮಣ್ಣು ತುಂಬಿಸಿ ಮುಚ್ಚಿಸಿದ ಘಟನೆ ಬುಧವಾರ ನಡೆದಿದೆ.

ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಮುಖ್ಯಮಂತ್ರಿ ನಿಧಿಯಿಂದ ದೇವಸ್ಥಾನದ ಅಂಗಳಕ್ಕೆ ಇಂಟರ್‌ಲಾಕ್ ಹಾಕುವ ಉದ್ದೇಶದಿಂದ ರೂ. 25 ಲಕ್ಷ ಮಂಜೂರಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿತ್ತು.

ಸುಮಾರು 80 ಮೀಟರ್ ಡಾಂಬರು ಹಾಕಿದ್ದ ಅಂಗಳವನ್ನು ನಿರ್ಮಿತಿ ಕೇಂದ್ರದವರು ಸಂಪೂರ್ಣ ಅಗೆದು ಹಾಕಿದ್ದು, ಸುಮಾರು ಎಂಟು ಅಡಿಯಷ್ಟಷ್ಟು ಹೊಂಡ ಮಾಡಿದ್ದರು. ಈ ಜಮೀನು ಧರ್ಮಸ್ಥಳ ಕ್ಷೇತ್ರದ ಒಡೆತನದಲ್ಲಿದ್ದು, ಅವರ ಗಮನಕ್ಕೆ ಬಾರದೆ ಜಿಲ್ಲಾಡಳಿತ ಹೊಂಡ ಮಾಡಿದ ಕ್ರಮಕ್ಕೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಅಲ್ಲಿ ತೆಗೆದ ಮಣ್ಣಿನಲ್ಲಿ ಸ್ಥಳೀಯರೊಬ್ಬರ ಮನೆಗೆ ಹೋಗುವ ಖಾಸಗಿ ರಸ್ತೆ ಅಭಿವೃದ್ಧಿಗೆ ಕೆಲವು ಲೋಡ್ ಮಣ್ಣು ಸುರಿಯಲಾಗಿತ್ತು. ಇದರಿಂದ ರಥಬೀದಿಯಲ್ಲಿ ಮಳೆ ನೀರು ನಿಂತು ಸ್ಥಳೀಯರು ಆ ಮಣ್ಣನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರು. ಮಣ್ಣು ಎಲ್ಲಿಂದ ತೆಗೆದಿದ್ದಾರೋ ಅಲ್ಲಿಗೆ ಹಾಕುವಂತೆ ಪಟ್ಟಣ ಪಂಚಾಯತಿ ಆಡಳಿತ ಸೂಚಿಸಿದ ಮೇರಗೆ ಟಿಪ್ಪರ್ ಮೂಲಕ ಮಣ್ಣನ್ನು ತಂದು ಅದೇ ಹೊಂಡಕ್ಕೆ ತುಂಬಿಸಲಾಗಿದೆ.

ಅರ್ಥ್‌ವರ್ಕ್‌ನಲ್ಲಿ ಕಮಿಷನ್
ಸರ್ಕಾರದ ಯಾವುದೇ ಕಾಮಗಾರಿ ನಡೆದರೂ ಡಾಂಬರು, ಕಾಂಕ್ರಿಟ್ ಕೆಲಸಕ್ಕಿಂತ ಹೆಚ್ಚು ಕಮಿಶನ್ ಅರ್ತ್‌ವರ್ಕ್‌ನಲ್ಲಿ ಸಿಗುತ್ತದೆ. ಹಾಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಜನಪ್ರತಿನಿಧಿಗಳೂ ಅರ್ತ್‌ವರ್ಕ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ.
 
ಇಲ್ಲೂ ಆಗಿರುವುದು ಅದೇ. ವಾಸ್ತವವಾಗಿ ಇಲ್ಲಿ ಇಂಟರ್‌ಲಾಕ್ ಅಳವಡಿಕೆಗೆ ಕೇವಲ ಅರ್ಧ ಅಡಿ ಮಾತ್ರ ಸಮತಟ್ಟು ಮಾಡಿದ್ದರೆ ಸಾಕಿತ್ತು. ಆದರೆ ಹೆಚ್ಚು ಬಿಲ್ ಮಾಡುವ ಉದ್ದೇಶದಿಂದ 7ರಿಂದ 8 ಅಡಿ ತಗ್ಗು ತೋಡಿ ಹಣ ಪೋಲು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.