ADVERTISEMENT

ಸುಳ್ಯ ಮೀಸಲಾತಿ ರದ್ದು ಹೋರಾಟಕ್ಕೆ ಪ್ರತಿ ಹೋರಾಟ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 5:25 IST
Last Updated 27 ಡಿಸೆಂಬರ್ 2017, 5:25 IST

ಸುಳ್ಯ: ’ಇಲ್ಲಿನ ವಿಧಾನಸಭಾ ಕ್ಷೇತ್ರದ ಮೀಸಲಾತಿ ರದ್ದುಗೊಳಿಸಬೇಕೆಂಬ ಹೋರಾಟ ಆರಂಭಗೊಂಡಿರುವುದು ಗಮನಕ್ಕೆ ಬಂದಿದ್ದು, ಇಂತಹ ಹೋರಾಟ ನಡೆದರೆ ನಾವು ಕೂಡಾ ಪ್ರತಿ ಹೋರಾಟ ನಡೆಸುತ್ತೇವೆ' ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಸುಳ್ಯದಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದ ಸಭೆಯಲ್ಲಿ ಮುಖಂಡರು ಹೇಳಿದರು.

ಆನಂದ ಬೆಳ್ಳಾರೆ ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ ಮೀಸಲಾತಿ ಇದ್ದರೂ, ದಲಿತರು ಬೇರೆಯಲ್ಲ, ಇತರರು ಬೇರೆಯಲ್ಲ ಎಂಬ ರೀತಿಯಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಕೆಲವರು ಸೇರಿಕೊಂಡು ಮೀಸಲಾತಿ ತೆಗೆಯಲು ಹೋರಾಟ ಆರಂಭಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ.  ಎಂದರು. ಬೆಂಬಲಿಸಿ ಮಾತನಾಡಿದ ಕೆ.ಎಂ.ಬಾಬು  ‘ಮೀಸಲಾತಿ ತೆಗೆಯುವ ಹುನ್ನಾರದ ವಿರುದ್ಧ ನಮ್ಮದು ಆಕ್ರೋಶವಿದೆ’ ಎಂದು ಹೇಳಿದರು.

ADVERTISEMENT

ದಲಿತ ದೌರ್ಜನ್ಯ ಕಾಯಿದೆ ದುರುಪಯೋಗವಾಗದಂತೆ ಹೆಚ್ಚಿನ ಗಮನ ಕೊಡಬೇಕು ಎಂಬ ಸಲಹೆಗಳನ್ನು ನಂದರಾಜ ಸಂಕೇಶ ನೀಡಿದರು. ಸುಬ್ರಹ್ಮಣ್ಯದಲ್ಲಿ ಗೃಹರಕ್ಷಕರು ಹೆಚ್ಚಾಗಿ ದಲಿತ ಸಮುದಾಯವರೇ ಇದ್ದುದರಿಂದ ಅವರನ್ನು ತೆಗೆದುಹಾಕಲಾಗಿದೆ. ಅವರನ್ನು ಪುನರ್ ನೇಮಕವಾಗಬೇಕು ಎಂದು ಅಚ್ಚುತ ಮಲ್ಕಜೆ ಹೇಳಿದಾಗ ಎಸ್‌ಪಿ ಮತ್ತೊಮ್ಮೆ ಪರಿಶೀಲಿಸುವುದಾಗಿ ತಿಳಿಸಿದರು.

ಅಚ್ಚುತ ಮಲ್ಕಜೆ, ಸರಸ್ವತಿ ಬೊಳಿಯಮಜಲು, ವಿಶ್ವನಾಥ ಅಲೆಕ್ಕಾಡಿ ಮಾತನಾಡಿದರು. ಈ ಸಭೆಯ ಹಲವು ವಿಚಾರಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಯುವ ಜಾಗೃತಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ ಭರವಸೆ ನೀಡಿದರು. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್‌ಕುಮಾರ್, ಎಸ್.ಐ. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.