ADVERTISEMENT

ಸೈನೈಡ್ ನೀಡಿದಾತನನ್ನೂ ತಕ್ಷಣ ಬಂಧಿಸಲಿಲ್ಲ ಏಕೆ?

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 10:40 IST
Last Updated 16 ಮಾರ್ಚ್ 2012, 10:40 IST

ಮಂಗಳೂರು: ಸೈನೈಡ್ ಅಕ್ರಮವಾಗಿ ಮಾರಾಟ ಮಾಡಿದ ಆರೋಪಿ ಮೊಹಮ್ಮದ್‌ನನ್ನು ಹತ್ಯೆ ಆರೋಪಿಯನ್ನು ಬಂಧಿಸಿದ 24 ಗಂಟೆಯೊಳಗೆ ಬಂಧಿಸಲಾಗಿದೆಯೇ? ಮಹಜರು ನಡೆಸಿದ ಪ್ರಮುಖ ಸ್ಥಳಗಳಲ್ಲಿ ಫೋಟೊ ತೆಗಿಸಿಲ್ಲ ಅಥವಾ ವೀಡಿಯೊ ಚಿತ್ರೀಕರಣ ನಡೆಸದೇ ಇರುವುದು ಏಕೆ? ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸರಣಿ ಹತ್ಯೆ ಆರೋಪ ಎದುರಿಸುತ್ತಿರುವ ಮೋಹನ್ ಕುಮಾರ್ ನ್ಯಾಯಾಲಯದಲ್ಲಿ ಇದ್ದವರನ್ನು ತಬ್ಬಿಬ್ಬುಗೊಳಿಸಿದ.

ತನಿಖಾಧಿಕಾರಿಯಾಗಿದ್ದ, ಅಂದಿನ ಪುತ್ತೂರು ಎಎಸ್‌ಪಿ ಚಂದ್ರಗುಪ್ತ ಅವರು ಎರಡನೇ ದಿನವಾದ ಗುರುವಾರವೂ ಒಂದನೇ ತ್ವರಿತಗತಿ ನ್ಯಾಯಾಲಯದಲ್ಲಿ ಹಾಜರಾಗಿ ಸಾಕ್ಷ್ಯ ನುಡಿದರು. ಮಧ್ಯಾಹ್ನ 1.15ಕ್ಕೆ ಆರೋಪಿ ಮೋಹನ್ ಪಾಟಿ ಸವಾಲು ಆರಂಭಿಸಿದ. ಆತನ ಕೆಲವು ಪ್ರಶ್ನೆಗಳು ಪಕ್ಕಾ ವಕೀಲರ ಸವಾಲಿನಂತೆಯೇ ಇದ್ದವು. ಪೊಲೀಸರು ಮಾಡಿರಬಹುದಾದ ಸಣ್ಣ ಲೋಪಗಳನ್ನೇ ಎತ್ತಿಕೊಂಡು ಆತ ಪಾಟಿ ಸವಾಲು ನಡೆಸಿದ.

ನಿಯಮ ಪ್ರಕಾರ ಆರೋಪಿಯನ್ನು ಬಂಧಿಸಿದ 24 ಗಂಟೆಯೊಳಗೆ ಆತನಿಗೆ ಅಕ್ರಮವಾಗಿ ಸೈನೈಡ್ ಮಾರಾಟ ಮಾಡಿದ ವ್ಯಕ್ತಿ ಮೊಹಮ್ಮದನನ್ನೂ ಬಂಧಿಸಬೇಕಿತ್ತು. ಆದರೆ ಎರಡೂವರೆ ತಿಂಗಳ ನಂತರ ಬಂಧಿಸಲಾಗಿದೆ, ಅದೂ ಸಿಐಡಿ ಅಧಿಕಾರಿಗಳ ಸೂಚನೆ ಮೇರೆಗಷ್ಟೇ ಪ್ರಕರಣ ಬಲವಾಗಿಸಲು ಮೊಹಮ್ಮದನನ್ನು ಬಂಧಿಸಲಾಗಿದೆ ಎಂದು ಪಾಟಿ ಸವಾಲಿನಲ್ಲಿ ಮೋಹನ್ ಪ್ರತಿಪಾದಿಸಿದ. ಆದರೆ ಇದನ್ನು ಚಂದ್ರಗುಪ್ತ ಅಲ್ಲಗಳೆದರು.

ಮಹಜರು ವೇಳೆ ಯಾವ ಸಂದರ್ಭಗಳಲ್ಲಿ ಫೊಟೊ ತೆಗೆಸಿದ್ದೀರಿ, ವೀಡಿಯೊ ಚಿತ್ರೀಕರಣ ಮಾಡಿಸಿದ್ದೀರಿ? ಎಂಬ ಆರೋಪಿ ಪ್ರಶ್ನೆಗೆ, `ಅಗತ್ಯ ಬಿದ್ದಾಗ ಮಾತ್ರ ನಡೆಸುತ್ತಿದ್ದೆವು~ ಎಂದು ಚಂದ್ರಗುಪ್ತ ಉತ್ತರಿಸಿದರು.
ಆರೋಪಿಗೆ ಸೈನೈಡ್ ಪೂರೈಸಿದ ಪುತ್ತೂರಿನ ಮೊಹಮ್ಮದ್ ಅಂಗಡಿ ಇದ್ದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದಾಗ ವೀಡಿಯೊ ಚಿತ್ರೀಕರಣ ನಡೆಸಿಲ್ಲ ಏಕೆ? ಫೊಟೊ ತೆಗೆಸಿಲ್ಲ ಏಕೆ? ಹೀಗಾಗಿ ಇದೊಂದು ಸುಳ್ಳು ದಾಖಲೆ ಸೃಷ್ಟಿ ಎಂದು ಆರೋಪಿ ಮೋಹನ್ ವಾದಿಸಿದ. ಈ ಹೇಳಿಕೆಯನ್ನು ತನಿಖಾಧಿಕಾರಿ ಅಲ್ಲಗಳೆದರು.

ಮೊಹಮ್ಮದ್ ಬಳಿ ಸೈನೈಡ್ ಮಾರಾಟ ಸಂಬಂಧ ಪರವಾನಗಿ ಇದ್ದುದನ್ನು ಪರಿಶೀಲಿಸಲಾಗಿದೆಯೇ ಎಂಬ ಪ್ರಶ್ನೆಗೆ, ಅವರು ಇಲ್ಲ ಎಂದರು. ಮೊಹಮ್ಮದ್‌ನ ಇತರ ಗ್ರಾಹಕರನ್ನು ವಿಚಾರಿಸಿದ್ದೀರಾ? ಎಂಬ ಆತನ ಪ್ರಶ್ನೆಗೆ, `ವಿಚಾರಿಸಿದ್ದೇವೆ. ಆದರೆ ದಾಖಲೆ ಇಟ್ಟಿಲ್ಲ~ ಎಂದರು.ಪ್ರಮುಖ ಸಾಕ್ಷಿ ಶಾಂತಿ ಹೇಳಿಕೆ ಸಮರ್ಥನೆಗೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೀರಾ? ಎಂಬುದು ಆರೋಪಿ ಮೋಹನನ ಮತ್ತೊಂದು ಪ್ರಮುಖ ಪ್ರಶ್ನೆಯಾಗಿತ್ತು. ಚಂದ್ರಗುಪ್ತ ಅವರು ಇದಕ್ಕೂ ಇಲ್ಲ ಎಂದೇ ಉತ್ತರಿಸಿದರು.

2009ರ ಏಪ್ರಿಲ್ 13ರಂದು ಮಡಿಕೇರಿಯ ಲಾಡ್ಜ್‌ನಲ್ಲಿ ತಂಗಿದ್ದು ಶಾಂತಿಯೇ ಎಂಬುದನ್ನು ದೃಢಪಡಿಸಿಕೊಂಡಿದ್ದೀರಾ? ಎಂದು ಪ್ರಶ್ನಿಸಿದ ಆರೋಪಿ, ಆಕೆಯ ಹೇಳಿಕೆ ಸುಳ್ಳು ಎಂದು ವಾದಿಸಿದ.
ಕೊಲೆಯಾದ ಅನಿತಾಗೆ ಆರೋಪಿ ಮೊದಲೆಲ್ಲ ಕರೆ ಮಾಡಿದ ಮೊಬೈಲ್ ವಿವರವನ್ನೊಳಗೊಂಡ ಸಿಡಿಆರ್ ಅನ್ನು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಸಲ್ಲಿಸಿದ್ದರೇ? ಎಂಬ ಪ್ರಶ್ನೆಗೂ `ಇಲ್ಲ~ ಎಂಬುದೇ ಚಂದ್ರಗುಪ್ತ ಅವರ ಉತ್ತರವಾಗಿತ್ತು. ಆರೋಪಿಯಿಂದ ಮೊಬೈಲ್ ವಶಪಡಿಸಿಕೊಂಡಾಗ ಅದು ಸ್ವಿಚ್ ಆಫ್ ಆಗಿತ್ತೇ ಎಂಬ ಸೂಕ್ಷ್ಮ ಪ್ರಶ್ನೆಯನ್ನೂ ಆತ ಕೇಳಿದ. ಇದನ್ನು ತಾವು ಪರಿಶೀಲಿಸಿಲ್ಲ ಎಂದು ಚಂದ್ರಗುಪ್ತ ತಿಳಿಸಿದರು.

ಆರೋಪಿಯಿಂದ ಅಂಗಿ, ಪ್ಯಾಂಟ್ ಬಿಟ್ಟು ಉಳಿದ ಸಾಮಗ್ರಿಗಳನ್ನು ಸ್ವಾಧೀನಪಡಿಸಿಕೊಂಡದ್ದಕ್ಕೆ ಆತನಿಗೆ ರಶೀತಿ ನೀಡಲಾಗಿತ್ತೆ? ಎಂದು ಕೇಳಿದ್ದಕ್ಕೆ `ಕೊಟ್ಟಿಲ್ಲ~ ಎಂದರು. ಆರೋಪಿಯ ಬಂಧನವಾದ ತಕ್ಷಣ ವಕೀಲರ ನೇಮಕಕ್ಕೆ ಅವಕಾಶ ಕೊಟ್ಟಿಲ್ಲ ಎಂಬ ಆತನ ವಾದವನ್ನು ಅವರು ಅಲ್ಲಗಳೆದರು. 2009ರ ಜೂ. 17ರಂದು ಸಾಕ್ಷಿ ಈಶ್ವರ ಶೆಟ್ಟಿ ಆರೋಪಿಯನ್ನು ನೋಡಿಯೇ ಇಲ್ಲ. ಅವರ ಹೇಳಿಕೆ ಸುಳ್ಳು ಎಂದು ಸಹ ಮೋಹನ್ ಹೇಳಿದ.

ಮಧ್ಯಾಹ್ನದ ಬಳಿಕ ಆರೋಪಿ ಮೋಹನ್‌ನನ್ನು ಬಂಧಿಸಿದ ದಿನ ಇನ್ಸ್‌ಪೆಕ್ಟರ್ ಕಾರ್ಯಭಾರ ನಡೆಸುತ್ತಿದ್ದ ಕೆ.ನಂಜುಂಡೇಗೌಡ ಅವರು ತಾವು ಆ ದಿನ ಕಂಡ ವಿದ್ಯಮಾನ ವಿವರಿಸಿದರು.ಆರೋಪಿ ಮೋಹನ್ ಮನೆ ಹಾಗೂ ಪುತ್ತೂರಿನಿಂದ ಪಡೆದ ಸೈನೈಡ್ ಬಾಟಲಿಗಳನ್ನು ಪರೀಕ್ಷಿಸಿ, ಬಾಟಲಿಗಳಲ್ಲಿ ಇದ್ದುದು ಸೈನೈಡ್ ಎಂಬುದನ್ನು ಮೊದಲು ದೃಢಪಡಿಸಿದ ಬೆಂಗಳೂರಿನ ವಿಧಿವಿಜ್ಞಾನ ತಜ್ಞ ವಿ.ಕೆ.ಮಲ್ಲೇಶ್ ಅವರೂ ಸಾಕ್ಷ್ಯ ನುಡಿದರು.

ಅನಿತಾ ಮೃತದೇಹವನ್ನು ಹಾಸನ ಬಸ್ ನಿಲ್ದಾಣ ಶೌಚಾಲಯದಲ್ಲಿ ಮೊದಲ ಬಾರಿಗೆ ನೋಡಿದ ಶೌಚಾಲಯ ಸ್ವಚ್ಛಗೊಳಿಸುವ ರಾಧಾ ಅವರು ಮತ್ತೊಬ್ಬ ಸಾಕ್ಷಿಯಾಗಿದ್ದರು.

ಮುಂದಿನ ವಿಚಾರಣೆ ಏ.20ಕ್ಕೆ
ಅನಿತಾ, ಸುನಂದಾ ಮತ್ತು ಲೀಲಾವತಿ ಸಾವಿಗೆ ಸಂಬಂಧಿಸಿ ತ್ವರಿತಗತಿ ನ್ಯಾಯಾಲಯದ ವಿಚಾರಣೆಯಲ್ಲಿ ಅಂದಿನ ತನಿಖಾಧಿಕಾರಿ ಚಂದ್ರಗುಪ್ತ ಅನಿತಾ ಸಾವಿಗೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿಯುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಪ್ರಕರಣದ ಇನ್ನೊಬ್ಬ ಪ್ರಮುಖ ಸಾಕ್ಷಿ ಹಾಗೂ ಆರೋಪಿಗೆ ಸೈನೈಡ್ ನೀಡಿದ ಮೊಹಮ್ಮದ್ ಸಾಕ್ಷ್ಯ ಸಂಗ್ರಹವಾಗಿಲ್ಲ. ಚಂದ್ರಗುಪ್ತ ಅವರು ಇತರ ಇಬ್ಬರ ಸಾವಿಗೆ ಸಂಬಂಧಿಸಿದಂತೆ ನೀಡುವ ಸಾಕ್ಷ್ಯಗಳ ಸಂಗ್ರಹವನ್ನೂ ಮಾಡಬೇಕಿದ್ದು, ಮೂರೂ ಪ್ರಕರಣಗಳ ಮುಂದಿನ ವಿಚಾರಣೆಯನ್ನು ಏ. 20ಕ್ಕೆ ಮುಂದೂಡಲಾಗಿದೆ.

ಆರೋಪಿ ಮೋಹನ್ ಸೈನೈಡ್ ನೀಡಿ ಕೊಂದಿದ್ದಾನೆ ಎಂದು ಹೇಳಲಾದ ಇನ್ನೂ 4 ಪ್ರಕರಣಗಳ ವಿಚಾರಣೆ ಇದೇ 19ರಂದು ಆರಂಭವಾಗಲಿದೆ. ಆದರೆ ಅಂದು ನ್ಯಾಯಾಧೀಶ ನಿಂಗಣ್ಣಗೌಡ ಜಂಟ್ಲಿ ಅವರು ರಜೆ ಇರುವುದರಿಂದ ವಿಚಾರಣೆ ಮರುದಿನ ಆರಂಭವಾಗಲಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಚೆಯ್ಯಬ್ಬ ಬ್ಯಾರಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT