ADVERTISEMENT

ಸ್ಟೇಟ್‌ಬ್ಯಾಂಕ್ ಬಸ್‌ ನಿಲ್ದಾಣದ ಅವ್ಯವಸ್ಥೆಗೆ ಬೇಕು ಮುಕ್ತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 8:56 IST
Last Updated 13 ಅಕ್ಟೋಬರ್ 2017, 8:56 IST

ಮಂಗಳೂರು: ನಗರದ ಹೃದಯಭಾಗ ಸ್ಟೇಟ್‌ಬ್ಯಾಂಕ್ ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆಗಳು ಎದ್ದು ಕಾಣುತ್ತಿವೆ. ಇಲ್ಲಿನ ಸರ್ಕಾರಿ ಬಸ್‌ ನಿಲ್ದಾಣದ ಜಾಗದಲ್ಲಿ ದೊಡ್ಡ ದೊಡ್ಡ ಹೊಂಡಗುಂಡಿಗಳು ಬಿದ್ದಿದ್ದು, ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಬಸ್ ಚಾಲಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಈ ಯಾತನೆಯಿಂದ ಮುಕ್ತಿಕೊಡಬೇಕಿದೆ ಎಂದು ಆಗ್ರಹಿಸುತ್ತಿದ್ದಾರೆ.

ಸ್ಟೇಟ್‌ಬ್ಯಾಂಕ್ ಮಂಗಳೂರು ನಗರದ ಒಂದು ಪ್ರಮುಖ ಭಾಗ, ರಾಜ್ಯ, ಹೊರ ರಾಜ್ಯಗಳಿಗೆ ತೆರಳುವ ಖಾಸಗಿ ಬಸ್ಸುಗಳ ನಿಲ್ದಾಣ. ದಿನಂಪ್ರತಿ ಇಲ್ಲಿಗೆ ಸಾವಿರಾರು ಜನರು ಬಂದು ಹೋಗುತ್ತಿರುತ್ತಾರೆ. ನಗರದ ಯಾವುದೇ ಭಾಗಗಳಿಗೆ ತೆರಳಬೇಕಾದರೂ ಮುಖ್ಯವಾಗಿ ಸ್ಟೇಟ್‌ಬ್ಯಾಂಕ್‌ಗೆ ಬಂದು ತೆರಳಬೇಕು.

ಸದ್ಯ ಇಲ್ಲಿನ ಸರ್ಕಾರಿ ಬಸ್ ತಂಗುವ ನಿಲ್ದಾಣವು ಸಂಪೂರ್ಣ ಹೊಂಡಗಳಿಂದ ತುಂಬಿ ಹೋಗಿದ್ದು, ವಿದ್ಯಾರ್ಥಿಗಳು, ಪ್ರಯಾಣಿಕರು ಹಾಗೂ ಬಸ್ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುವುದು ಸಾರ್ವಜನಿಕರ ಆರೋಪ.

ADVERTISEMENT

ಈಗ ಮಳೆಗಾಲವಾದುದರಿಂದ ಬಸ್‌ಗಳು ಚಲಿಸುವ ವೇಳೆ ಪಾದಾಚಾರಿಗಳ ಮೇಲೆ ಕೆಸರು ಎರಚುತ್ತಿದ್ದು, ಜೊತೆಗೆ ಇಲ್ಲಿ ಸರ್ಕಾರಿ ಬಸ್‌ಗಳು ನಿಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಚಾಲಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ತಂಗುದಾಣದಲ್ಲಿ ಖಾಸಗಿ ಬಸ್ ನಿಲ್ಲುವ ಸ್ಥಳದಲ್ಲಿ ಕಾಂಕ್ರೀಟೀಕರಗೊಂಡಿದ್ದು, ಸರ್ಕಾರಿ ಬಸ್ ನಿಲ್ಲುವ ಜಾಗದಲ್ಲಿ ಮಾತ್ರ ಹೊಂಡಗುಂಡಿಗಳು ತುಂಬಿಕೊಂಡಿದೆ.

ಬಲಿಗಾಗಿ ಕಾಯುತ್ತಿದೆ ಚರಂಡಿ ಗುಂಡಿ
ಸ್ಟೇಟ್‌ಬ್ಯಾಂಕ್‌ನಿಂದ ಹೊರಡುವ ರಸ್ತೆ ಬದಿಯಲ್ಲಿ ಚರಂಡಿ ಗುಂಡಿಯೊಂದು ಬಾಯ್ತೆರೆದುಕೊಂಡಿದೆ. ಜೊತೆಗೆ ಈ ಗುಂಡಿಯಿಂದ ಚರಂಡಿ ವಾಸನೆ ಬರುತ್ತಿದ್ದು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ಉಂಟಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲೇ ನೂರಾರು ಜನರು, ವಿದ್ಯಾರ್ಥಿಗಳು ಓಡಾಡುತ್ತಿರುತ್ತಾರೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಮಹಾನಗರ ಪಾಲಿಕೆಯು ಈ ಗುಂಡಿಯನ್ನು ಮುಚ್ಚುವ ಬದಲು ಅಲ್ಲಿಯೇ ಒಂದು ಬ್ಯಾರಿಕೇಡ್ ಇಡುವ ಮೂಲಕ ಕೈತೊಳೆದುಕೊಂಡಿದೆ ಎನ್ನುವುದು ಸಾರ್ವಜನಿಕ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.