ADVERTISEMENT

ಹತ್ತಕ್ಕೆ 10 ಗ್ರೇಡ್ ಸಾಧಿಸಿದ ರಷ್ಮಾ!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 10:15 IST
Last Updated 26 ಫೆಬ್ರುವರಿ 2012, 10:15 IST

ಮಂಗಳೂರು: ಘಟಿಕೋತ್ಸವಕ್ಕೆ ಹಾಜರಾಗಿದ್ದ ಇತರೆ ವಿದ್ಯಾರ್ಥಿನಿಯರಂತೆ ಕೆನೆ ಬಣ್ಣದ ಸೀರೆ ಉಟ್ಟು, ಎನ್‌ಐಟಿಕೆ ಲಾಂಛನವಿರುವ ಶಲ್ಯ ಧರಿಸಿದ್ದ ಆರ್.ಎಸ್.ವಿ.ರಷ್ಮಾ, ಜಿಯೊಟೆ ಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಹತ್ತಕ್ಕೆ 10 ಗ್ರೇಡ್ ಪಡೆದಿದ್ದನ್ನು ವಿಭಾಗೀಯ ಮುಖ್ಯಸ್ಥರು ಪ್ರಕಟಿಸುತ್ತಿದ್ದಂತೆ ಸಭಾಂಗಣ ದಲ್ಲಿದ್ದ ಎಲ್ಲರೂ ಒಂದು ಕ್ಷಣ ಮೌನವಾಗಿ ವೇದಿಕೆಯತ್ತ ತದೇಕ ಚಿತ್ತರಾದರು.

ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಶನಿವಾರ 9ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದವರ ಪೈಕಿ ಎಂಟನೆಯವರಾಗಿ ವೇದಿಕೆ ಹತ್ತಿದ್ದವರು ಕೇರಳ ಮೂಲದ ರಷ್ಮಾ. ಎಂಜಿನಿಯರಿಂಗ್ ವಿಷಯವೊಂದರಲ್ಲಿ ಹತ್ತಕ್ಕೆ 10 ಗ್ರೇಡ್ ಪಾಯಿಂಟ್ ಪಡೆಯುವವರು ತೀರಾ ವಿರಳ. ಹೀಗಾಗಿ ಈ ಸಾಧನೆ ವಿಶೇಷವಾಗಿ ಗಮನ ಸೆಳೆಯಿತು.

ನಂತರ ಪತ್ರಕರ್ತರೊಡನೆ ಖುಷಿ ಹಂಚಿಕೊಂಡ ತಿರುವನಂತಪುರದ ರಷ್ಮಾ, `ಈಗ ಅನಾಡ್‌ನ (ತಿರುವನಂತಪುರ ಜಿಲ್ಲೆ) ಮೋಹನದಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದೇನೆ. ತಿರುವನಂತರಪುರ ಟಿ.ಕೆ.ಎಂ.ಕಾಲೇಜಿನಲ್ಲಿ ಬಿ.ಟೆಕ್ ಮಾಡಿದ್ದೆ. ಆಗ 10ರಲ್ಲಿ 8.35 ಗ್ರೇಡ್ ಪಡೆದಿದ್ದೆ~ ಎಂದು ನಕ್ಕರು.

`ದೇವರ ದಯೆ, ಕುಟುಂಬ ಮತ್ತು ಶಿಕ್ಷಕ ವರ್ಗದ ಸಹಕಾರ, ಪರಿಶ್ರಮ ಯಶಸ್ಸಿಗೆ ಕಾರಣ. ಗಮನವಿಟ್ಟು ಪಾಠ ಕೇಳಿ ನೋಟ್ಸ್ ತೆಗೆದುಕೊಳ್ಳುತ್ತಿದ್ದೆ. ಗಂಟೆಗಟ್ಟಲೆ ಓದದಿದ್ದರೂ ನಿಯಮಿತವಾಗಿ ಅಧ್ಯಯನ ಮಾಡುತ್ತಿದ್ದೆ~ ಎಂದು ಕಣ್ಣರಳಿಸಿದರು ರಷ್ಮಾ.

ರಷ್ಮಾ ತಂದೆ ಆರ್.ಎನ್.ಸತ್ಯದಾಸ್ ನಿವೃತ್ತ ಪ್ರೊಫೆಸರ್. ತಾಯಿ ವಿಲಾಸಿನಿ ಕೇರಳ ಜಲಮಂಡಳಿಯಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್.

ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್ ಎಂಜಿನಿಯರಿಂಗ್‌ನಲ್ಲಿ 3 ಚಿನ್ನದ ಪದಕ ಪಡೆದಿರುವ ರೋಹಿತ್ ಸರ್ಕಾರ ಕೋಲ್ಕತ್ತದವರು. `3 ಚಿನ್ನದ ಪದಕ ಖುಷಿ ತಂದಿವೆ. ಕುಟುಂಬವರ್ಗ ಹಾಜರಿರುವುದು ಖುಷಿ ಇಮ್ಮಡಿಗೊಳಿಸಿದೆ~ ಎಂದರು ಸದ್ಯ ಗುಜರಾತ್‌ನಲ್ಲಿ ರಿಲಯನ್ಸ್ ಇಂಡಸ್ಟ್ರಿಯಲ್ಲಿ ಕರೋಷನ್ ಮತ್ತು ಇನ್‌ಸ್ಪೆಕ್ಷನ್ ಎಂಜಿನಿಯರ್ ಆಗಿರುವ ರೋಹಿತ್.

`ಹೈಸ್ಕೂಲ್ ಮುಗಿಸಿದ್ದು ದೇಶದ ಎರಡನೇ ಅತಿ ಹಳೆ ಶಾಲೆಯಾದ ಸೇಂಟ್ ಥಾಮಸ್ ಬಾಲಕರ ಶಾಲೆಯಲ್ಲಿ~ ಎಂದು ಹೆಮ್ಮೆಪಟ್ಟ ಅವರಿಗೆ, ಅಮೆರಿಕ, ಯುರೋಪ್‌ನಲ್ಲಿ ಡಾಕ್ಟರೇಟ್‌ಗಾಗಿ ಉನ್ನತ ವ್ಯಾಸಂಗ ಮಾಡುವ ಇರಾದೆ ಇದೆ. ನಂತರ ಭಾರತದಲ್ಲೇ ನೆಲೆಸುವ ಬಯಕೆ ಅವರದು.

`ಇಲ್ಲಿ ಬೋಧನೆ ಅತ್ಯುತ್ತಮ. ಯಶಸ್ಸಿಗೆ ಹೆಚ್ಚಿನ ಶ್ರಮ ಹಾಕಲಿಲ್ಲ~ ಎನ್ನುತ್ತಾರೆ ರೋಹಿತ್.ಬಿ.ಟೆಕ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ 2 ಚಿನ್ನದ ಪದಕ ಕೊರಳಿಗೇರಿಸಿದ್ದ ಕೇತಕಿ ಗೋಸ್ವಾಮಿ ಒಡಿಶಾದ ರೂರ್ಕೆಲಾದವರು. ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ ಪರೀಕ್ಷೆ ತೆಗೆದುಕೊಳ್ಳುವ ಯೋಚನೆಯಲ್ಲಿದ್ದಾರೆ. `ಇಲ್ಲಿಗೆ ಬಂದಾಗ ಹೊರಜಗತ್ತಿಗೆ ತೆರೆದುಕೊಂಡೆ. ಸವಾಲು ಎದುರಿಸುವುದನ್ನು ಕಲಿತೆ. ವ್ಯಕ್ತಿತ್ವ ರೂಪಿಸಿಕೊಳ್ಳಲೂ ಸಾಧ್ಯವಾಯಿತು. ಚಿನ್ನದ ಪದಕಕ್ಕೆ ಆಯ್ಕೆ ಮಾಡಿದ್ದಕ್ಕೆ ಅಭಾರಿ~ ಎಂದು ವಿನೀತರಾದರು.

ಪೇಟಾ, ಉತ್ತರೀಯ!
ಘಟಿಕೋತ್ಸವಕ್ಕೆ ಬಿ.ಟೆಕ್ ಮತ್ತು ಎಂ.ಟೆಕ್ ಪದವಿ ಸ್ವೀಕರಿಸಲು ಬಂದಿದ್ದ ವಿದ್ಯಾರ್ಥಿಗಳು ಬಿಳಿ ಅಂಗಿ ಮತ್ತು ಕಪ್ಪು ಪ್ಯಾಂಟು ಧರಿಸಿದ್ದರೆ, ವಿದ್ಯಾರ್ಥಿನಿಯರೆಲ್ಲ ಕೆನೆಬಣ್ಣದ ಸೀರೆ ಉಟ್ಟಿದ್ದರು. ಎಲ್ಲರೂ ಎನ್‌ಐಟಿಕೆ ಲಾಂಛನದ ಜರಿಯಂಚಿನ ಶಲ್ಯ ಧರಿಸಿದ್ದರು. ಸಂಸ್ಥೆಯಿಂದಲೇ ಶಲ್ಯ ನೀಡಲಾಗಿತ್ತು.

ವಿವಿಧ ವಿಭಾಗಗಳ ಮುಖ್ಯಸ್ಥರು, ವೇದಿಕೆ ಮೇಲಿದ್ದ ಅತಿಥಿಗಳು ಭಿನ್ನ ಬಣ್ಣದ ಶಲ್ಯ, ಮೈಸೂರು ಪೇಟ ಮುಡಿಗೇರಿಸಿದ್ದು ಗಮನ ಸೆಳೆಯಿತು.ಈ ಬಾರಿ 1132 ವಿದ್ಯಾರ್ಥಿಗಳು ಸ್ನಾತಕರಾಗಿದ್ದರು. ಪದವಿ ಸ್ವೀಕರಿಸಲು 691 ಮಂದಿ ಹಾಜರಿದ್ದರು. 37 ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗಾಗಿ ವಿವಿಧ ಪದಕ ಪಡೆದಿದ್ದಾರೆ. ಸ್ನಾತಕೋತ್ತರ ಪದವೀಧರರ ಸಂಖ್ಯೆ (607), ಪದವೀಧರರಿಗಿಂತ (509) ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT