ADVERTISEMENT

ಹೆಬ್ರಿ ಗ್ರಾಮಸಭೆ: ಸುವರ್ಣ ಗ್ರಾಮ ಗದ್ದಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 11:15 IST
Last Updated 18 ಫೆಬ್ರುವರಿ 2011, 11:15 IST

ಹೆಬ್ರಿ: ಎರಡು ವರ್ಷದ ಹಿಂದೆ ಹೆಬ್ರಿ ಗ್ರಾಮ ಪಂಚಾಯಿತಿಗೆ ಮಂಜೂರಾದ ಸುವರ್ಣ ಗ್ರಾಮ ಯೋಜನೆ ರದ್ದಾಗಿದ್ದು, ಈ ಬಾರಿಯ ಗ್ರಾಮಸಭೆಯಲ್ಲಿ ಮತ್ತೆ ಸುವರ್ಣ ಗ್ರಾಮದ ಗದ್ದಲ ಕೇಳಿಬಂತು. ಈ ವಿಚಾರದಲ್ಲಿ ಕ್ಷಣಕಾಲ ಬಿಗಿಯಾದ ವಾತಾವರಣ ಸೃಷ್ಟಿಯಾಯಿತು. ಹೆಬ್ರಿ ಸಮಾಜಮಂದಿರದಲ್ಲಿ ಗುರುವಾರ ನಡೆದ ಹೆಬ್ರಿ ಗ್ರಾಮ ಪಂಚಾಯಿತಿಯ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಈ ಬಗ್ಗೆ ಪರ ವಿರೋಧ ವಾದ ಕೇಳಿಬಂತು.

ಹೆಬ್ರಿ ಪೇಟೆಯಾದ್ಯಂತ ಸ್ವಚ್ಛತೆ ಅಭಿವೃದ್ಧಿ ವಿಚಾರದಲ್ಲಿ ಕೆಲಸ ಕುಂಠಿತವಾಗಿದೆ ಎಂದು ಸ್ಥಳೀಯರಾದ ಮೋಹನದಾಸ್ ನಾಯಕ್ ಆರೋಪಿಸಿದರು. ಗ್ರಾಮಸ್ಥ ಎಚ್.ಕೆ.ಶ್ರೀಧರ ಶೆಟ್ಟಿ ಎದ್ದುನಿಂತು ಸುವರ್ಣ ಗ್ರಾಮ ರದ್ದಾದ ಕಾರಣ ಹೆಬ್ರಿಗೆ ಅನುದಾನ ಬಂದಿಲ್ಲ. ಅಭಿವೃದ್ಧಿ ಮಾಡಲು ಹಣವಿಲ್ಲ. ಅಭಿವೃದ್ಧಿಗೆ ಅನುದಾನ ನೀಡಲು ಮೋಹನದಾಸ್ ನಾಯಕ್ ಅಧ್ಯಕ್ಷತೆಯಲ್ಲಿ ರಾಜಧಾನಿ ಬೆಂಗಳೂರಿಗೆ ನಿಯೋಗ ತೆರಳಿ ಮನವಿ ನೀಡುವಂತೆ ನಿರ್ಣಯ ಮಾಡಲು ಒತ್ತಾಯಿಸಿದರು.

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಎಕ್ಸ್‌ರೇ ಘಟಕ, ಪೂರ್ಣ ಪ್ರಮಾಣದ ಪರೀಕ್ಷಾ ಕೇಂದ್ರ ತೆರೆಯುವಂತೆ ಒತ್ತಾಯಿಸಿದ ಶ್ರೀಧರ ಶೆಟ್ಟಿ, ಉಡುಪಿಯ ಸರ್ಕಾರಿ ಜಿಲ್ಲಾಸ್ಪತ್ರೆ ಈಗ ಖಾಸಗಿ ನರ್ಸಿಂಗ್ ಹೋಮ್ ಆಗಿದೆ. ಇದನ್ನು ಸರಿಪಡಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನ ಸೆಳೆದರು.ಹೆಬ್ರಿಗೆ 108 ಅಂಬುಲೆನ್ಸ್ ಸೇವೆ ಒದಗಿಸಲು ಮತ್ತು ಜಿಲ್ಲಾಸ್ಪತ್ರೆ ಸಮಸ್ಯೆ ಸರಿಪಡಿಸಲು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ರಸ್ತೆ ಬದಿ ಮತ್ತು ಕಸದ ತೊಟ್ಟಿ ಬಳಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಹೊರ ಊರಿನಿಂದ ಹೆಬ್ರಿ ಪರಿಸರಕ್ಕೆ ಮಂಗಗಳನ್ನು ತಂದು ಬಿಡುವುದಕ್ಕೆ ನವೀನ್ ಅಡ್ಯಂತಾಯ ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಶು ಸಂಗೋಪನಾ ಇಲಾಖೆ ಸಹಾಯಕ ಇಲಾಖೆಯ ಡಾ. ಚಂದ್ರಕಾಂತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.ಜಿಲ್ಲಾ ಪಂಚಾಯಿತಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಮತಾ ನಾಯ್ಕೆ, ಪಂಚಾಯಿತಿ ಉಪಾಧ್ಯಕ್ಷ ಡಿ.ಜಿ.ರಾಘವೇಂದ್ರ ದೇವಾಡಿಗ, ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಡಿ., ಕಾರ್ಯದರ್ಶಿ ಪುರಂದರ ಎಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.