ADVERTISEMENT

ಹೈಕೋರ್ಟ್ ಆದೇಶ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 10:05 IST
Last Updated 22 ಜೂನ್ 2011, 10:05 IST

ಮಂಗಳೂರು: ಬೆಂಗಳೂರು-ಮಂಗಳೂರು-ಕಣ್ಣೂರು ರಾತ್ರಿ ರೈಲನ್ನು(ಗಾಡಿ ನಂ. 6517/18) ಕಾರವಾರದವರೆಗೂ ವಿಸ್ತರಿಸಬೇಕು ಎಂದು ರಾಜ್ಯ ಹೈಕೋರ್ಟ್ ಆದೇಶಿಸ್ದ್ದಿದು, ಕರಾವಳಿಯ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳು ಹೈಕೋರ್ಟ್ ಆದೇಶ ಪರಿಗಣಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿರುವ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ, ರೈಲ್ವೆ ಮಂಡಳಿ ಸ್ಪಂದಿಸದೇ ಇದ್ದಲ್ಲಿ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಸಮಿತಿ ಸಂಚಾಲಕ ಹನುಮಂತ ಕಾಮತ್, `2009ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರವಲಯ ರೈಲ್ವೆ ವೇಳಾಪಟ್ಟಿ ಸಮಾವೇಶದಲ್ಲಿ ನೈರುತ್ಯ, ದಕ್ಷಿಣ ಮತ್ತು ಕೊಂಕಣ ರೈಲ್ವೆಯ ಅಧಿಕಾರಿಗಳು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಗೆ ಬೆಂಗಳೂರಿನಿಂದ ನೇರ ರೈಲ್ವೆ ಸಂಪರ್ಕ ಬೇಡಿಕೆಯನ್ನು ಪರಿಗಣಿಸಿ ಬೆಂಗಳೂರು- ಮಂಗಳೂರು ರೈಲನ್ನು ಕಾರವಾರಕ್ಕೆ ವಿಸ್ತರಿಸಲು ನಿರ್ಧರಿಸಿ ಬಜೆಟ್‌ನಲ್ಲಿ ಮಂಡಿಸುವಂತೆ ಕೇಂದ್ರ ರೈಲ್ವೆ ಮಂಡಳಿಗೆ ಶಿಫಾರಸು ಕಳುಹಿಸಿದ್ದರು.

ಆದರೆ ಕೇಂದ್ರ ಸಚಿವರೊಬ್ಬರು ತನ್ನ ಸ್ವಹಿತಕ್ಕಾಗಿ ಈ ರೈಲನ್ನು ಕಣ್ಣೂರಿಗೆ ವರ್ಗಾಯಿಸಿದರು. ಕಣ್ಣೂರಿಗೆ ವಿಸ್ತರಿಸಲಾದ ರೈಲು ಪ್ರಸ್ತುತ ಖಾಲಿಯಾಗಿ ಸಂಚರಿಸುತ್ತಿದೆ ಎಂದು ಮಾಹಿತಿ ಹಕ್ಕಿನ ಮೂಲಕ ತಿಳಿದುಕೊಳ್ಳಲಾಗಿದೆ. ಈ ಬಗ್ಗೆ  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಹೈಕೋರ್ಟ್ ಬೆಂಗಳೂರು-ಮಂಗಳೂರು ರೈಲನ್ನು ಕಾರವಾರಕ್ಕೆ 3 ತಿಂಗಳೊಳಗೆ ವಿಸ್ತರಿಸುವಂತೆ ಆದೇಶ ನೀಡಿದೆ ಎಂದು ವಿವರಿಸಿದರು.

ADVERTISEMENT

`ಕೇರಳ, ತಮಿಳುನಾಡಿನ ಸಂಸದರು ತಮ್ಮ ರಾಜ್ಯಕ್ಕೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಒಟ್ಟಾಗುತ್ತಾರೆ. ಆದರೆ ರಾಜ್ಯದ ಸಂಸದರು ಪಕ್ಷದ ನೆಲೆಯಲ್ಲಿ ಮಾತ್ರ ಯೋಚಿಸುತ್ತಾರೆ. ಸೌಲಭ್ಯ ದೊರೆತರೆ ಆಡಳಿತದಲ್ಲಿರುವ ಪಕ್ಷಕ್ಕೆ ಲಾಭ ಎಂದು ವಿರೋಧ ಪಕ್ಷ ಭಾವಿಸುತ್ತದೆ. ರಾಜ್ಯದ ಸಂಸದರಲ್ಲಿ ಒಗ್ಗಟ್ಟು ಇಲ್ಲದಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ಕಾರ್ಯದರ್ಶಿ ದಿವಾಕರ ಸಾಮಾನಿ, ಸದಸ್ಯ ಚಂದ್ರಹಾಸ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.