ADVERTISEMENT

‘ಅಸ್ತ್ರ’ಕ್ಕೆ ಬೇಸ್ತು ಬೀಳುತ್ತಿರುವ ಅಧಿಕಾರಿಗಳು...!

ಬಂಟ್ವಾಳ: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪ

ಮೋಹನ್ ಕೆ.ಶ್ರೀಯಾನ್
Published 22 ಮಾರ್ಚ್ 2014, 9:47 IST
Last Updated 22 ಮಾರ್ಚ್ 2014, 9:47 IST

ಬಂಟ್ವಾಳ: ಲೋಕಸಭಾ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕಾರ್ಯ ಆರಂ­ಭ­­ವಾಗಿದೆ. ಇದೀಗ ಜಾರಿಯಲ್ಲಿರುವ ‘ಚುನಾವಣಾ ನೀತಿ ಸಂಹಿತೆ’ ಉಲ್ಲಂಘ­ನೆಗಳಿಗೆ ಸಂಬಂಧಿಸಿದಂತೆ ಬರುತ್ತಿರುವ ಆರೋಪಗಳು ಮತ್ತು ದೂರುಗಳು ಇಲ್ಲಿನ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರನ್ನು ಬೇಸ್ತು ಬೀಳಿಸ­ತೊಡಗಿದೆ.

ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾ­ಧಿ­ಕಾರಿ ಎ.ವಿ.ಗಣೇಶ್ ಅವರು ಕುಡಿ­ಯುವ ನೀರಿನ ಪೂರೈಕೆಗೆ ಸಂಬಂಧಿಸಿ­ದಂತೆ  ಬುಧವಾರ ಸಂಜೆ ಕರೆದಿದ್ದ ಗುತ್ತಿಗೆ ಆಧಾರಿತ ಪಂಪ್ ಆಪರೇಟ­ರ್‌ಗಳ ಸಭೆಗೆ ಚುನಾವಣಾ ಅಧಿಕಾರಿ­ಗಳು ಧಾವಿಸಿ ಬಳಿಕ ವಾಪಾಸಾ­ಗಿದ್ದಾರೆ.

ಆರಂಭದಲ್ಲಿ ಬಂಟ್ವಾಳ ತಹಶೀ­ಲ್ದಾರ್ ಬಿ.ಎಸ್.ಮಲ್ಲೇ­ಸ್ವಾಮಿಗೆ ದೂರವಾಣಿ ಕರೆಯೊಂದು ಬಂದಿದ್ದು, ಬಂಟ್ವಾಳ ಪುರಸಭೆಯಲ್ಲಿ  ಕುಡಿ­ಯುವ ನೀರಿನ ಪೂರೈಕೆ ಬಗ್ಗೆ ರಾಜಕೀಯ ಪ್ರೇರಿತ ಸಭೆ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಕಂದಾಯ ಇಲಾಖೆ ಸಿಬ್ಬಂದಿ­ಯನ್ನು ಕಳುಹಿಸಿದಾಗ ಕುಡಿಯುವ ನೀರು ಪೂರೈಕೆಗೆ ಸಂಬಂಧಿ­ಸಿ­ದಂತೆ ಸಿಬ್ಬಂದಿ ಚರ್ಚೆ ನಡೆಯುತ್ತಿ­ರುವುದು ಕಂಡು ಬಂದಿದೆ. ಕುಡಿಯುವ ನೀರಿನ ಪೂರೈಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲವಾದರೂ ಚುನಾವಣೆ ವೇಳೆ ಈ ಬಗ್ಗೆ (ಮೂಲ­ಸೌಕರ್ಯ)ಸಾಕಷ್ಟು ದೂರುಗಳು ಬರುವ ನಿರೀಕ್ಷೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಭೆ ನಡೆಸಲಾಗಿದೆ ಎಂದು ಮುಖ್ಯಾ­ಧಿಕಾರಿ ಅವರು ತಹಶೀಲ್ದಾರ­ರಿಗೆ ಸ್ಪಷ್ಟಪಡಿಸಿದ್ದಾರೆ.

ಕಳೆದ ಪುರಸಭೆ ಚುನಾವಣೆ ವೇಳೆ ಇಲ್ಲಿನ ಚಂಡ್ತಿಮಾರು ಪರಿಶಿಷ್ಟ ಕಾಲೊ­ನಿಗೆ ಮಂಜೂರಾದ ಸ್ಟೀಲು ಕಪಾಟು ವಿತರಣೆ ಮಾಡಿರುವ ಪ್ರಕರ­ಣ­ದಲ್ಲಿ ಅಂದಿನ ಮುಖ್ಯಾಧಿಕಾರಿ ಆರ್.ವಿ.ಜತ್ತನ್ನ ಅಮಾನತು­ಗೊಂಡಿರು­ವು­ದನ್ನು ಇಲ್ಲಿ ಸ್ಮರಿಸಬಹುದು.  

ಇನ್ನೊಂದೆಡೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಮಣಿಹಳ್ಳ ಸಮೀಪದ ಮಣಿ ಎಂಬಲ್ಲಿ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ಅವರು ಇತ್ತೀಚೆಗೆ ರಾತ್ರೋರಾತ್ರಿ ಕೊಳವೆ ಬಾವಿ ತೋಡಿಸುತ್ತಿದ್ದಾರೆ ಎಂಬ ದೂರು ಬಂದಿದ್ದು, ಅಲ್ಲಿಯೂ ಅವರ ಸ್ವಂತ ಜಮೀನಿನಲ್ಲಿ ಕೊಳವೆ ಬಾವಿ ಕೊರೆದಿರುವುದು ಕಂಡು ಬಂದಿದೆ. ಕಳೆದ ಶನಿವಾರ ಕಲ್ಲಡ್ಕದಲ್ಲಿ ನಡೆದ ಕಾಂಗ್ರೆಸ್ ಸಾಮರಸ್ಯ ಸಮಾ­ವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾ­ನಾಥ ರೈ ಅವರ ಉಪ­ಸ್ಥಿತಿಯಲ್ಲಿ ಸ್ಥಳೀಯ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಅವರು ಆರ್‍ಎಸ್‍ಎಸ್ ಮುಖಂ­ಡ ಡಾ.ಕೆ.­ಪ್ರಭಾಕರ ಭಟ್ಟರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿ­ರುವ ಬಗ್ಗೆಯೂ ದೂರುಗಳು ಬಂದಿದ್ದರೂ, ಇಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ­ಯಾಗಿಲ್ಲ.

ಈ ನಡು­ವೆ ಕಳೆದ ಭಾನುವಾರ ಪುಂಜಾಲಕಟ್ಟೆಯಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯ­ಕ್ರಮ­ದಲ್ಲಿ ಮಾಜಿ ಉಪ ಮುಖ್ಯ­ಮಂತ್ರಿ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು, ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ, ಆರ್‍ಎಸ್‍ಎಸ್ ಮುಖಂಡ ಡಾ.ಕೆ.­ಪ್ರಭಾಕರ ಭಟ್ ಮತ್ತಿತರರು ಭಾಷಣ ಮಾಡಿರುವ ಬಗ್ಗೆಯೂ ಚುನಾವ­ಣಾ­ಧಿಕಾರಿಗಳು ವೀಡಿಯೋ ಪರಿಶೀಲನೆ ನಡೆಸಿದ್ದು, ಅಲ್ಲಿ ರಾಜ­ಕೀಯ ಭಾಷಣ ಕಂಡು ಬಂದಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿ­ಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆ ವೇಳೆ ಕೆಲವೊಂದು ಗ್ರಾಮೀಣ ಪ್ರದೇಶ­ದಲ್ಲಿ ಅಕ್ರಮ ಮದ್ಯ ಮತ್ತು ಹಣ ಹಂಚಿಕೆ ಹಾಗೂ ವಾಹನದಲ್ಲಿ ಹಣದ ಕಂತೆ  ಸಾಗಾಟ ಮಾಡಲಾಗುತ್ತಿದೆ ಎಂಬ ನಕಲಿ ಕರೆಗಳು ಪೊಲೀಸರನ್ನು ಸಾಕಷ್ಟು ಬಾರಿ ಬೇಸ್ತು ಬೀಳಿಸಿವೆ ಎಂಬುದು ಇಲ್ಲಿನ ಪೊಲೀಸರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.