ADVERTISEMENT

ಪಿಲಿನಲಿಕೆ ಏಳನೇ ಆವೃತ್ತಿ: 12 ತಂಡಗಳ ಸ್ಪರ್ಧೆ

ಗಣರಾಜ್ಯೋತ್ಸವ ಪೆರೇಡ್‌, ಚಲನಚಿತ್ರಗಳಲ್ಲಿ ಹುಲಿ ಕುಣಿತಕ್ಕೆ ಅವಕಾಶ: ಮಿಥುನ್ ರೈ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:12 IST
Last Updated 4 ಅಕ್ಟೋಬರ್ 2022, 6:12 IST
ತಂಡಗಳು
ತಂಡಗಳು   

ಮಂಗಳೂರು: ದಸರಾ ಸಂಭ್ರಮದಲ್ಲಿರುವ ಮಂಗಳೂರಿನ ಜನರ ಹೃದಯ ತಣಿಸಲು ಪಿಲಿನಲಿಕೆಯ ವೇದಿಕೆ ಮಂಗಳಾ ಕ್ರೀಡಾಂಗಣ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಸಜ್ಜಾಗಿದೆ. ‍ಪಿಲಿನಲಿಕೆ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ 7ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿದ್ದು ಲಕ್ಷಾಂತರ ಮೊತ್ತದ ಬಹುಮಾನ ಗಳಿಸಲು ಪ್ರಯತ್ನಿಸಲಿವೆ.

‘ಕೋವಿಡ್ ಕಾರಣದಿಂದ ಎರಡು ವರ್ಷ ಪಿಲಿನಲಿಕೆ ಆಯೋಜಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಮೊದಲ ಬಹುಮಾನವಾಗಿ ₹ 3 ಲಕ್ಷ, ಎರಡನೇ ಬಹುಮಾನ ₹ 2 ಲಕ್ಷ ಮತ್ತು ಮೂರನೇ ಬಹುಮಾನ ₹ 1 ಲಕ್ಷ ನೀಡಲಾಗುವುದು. ಬಹುಮಾನ ಮೊತ್ತದೊಂದಿಗೆ ಫಲಕವೂ ನೀಡಲಾಗುವುದು. ವೈಯಕ್ತಿಕವಾಗಿ ಉತ್ತಮ ಮರಿ ಹುಲಿ, ಕರಿ ಹುಲಿ, ಮುಡಿ ಹಾರಿಸುವುದು, ತಾಸೆ, ಬಣ್ಣಗಾರಿಕೆ ಹಾಗೂ ಉತ್ತಮ ಕುಣಿತಕ್ಕೆ ತಲಾ ₹ 50 ಸಾವಿರ ನೀಡಲಾಗುವುದು. ಎಲ್ಲ ತಂಡಗಳಿಗೂ ಪ್ರೋತ್ಸಾಹಕರ ₹ 50 ಸಾವಿರ ನೀಡಲಾಗುವುದು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಟ ಸುನಿಲ್ ಶೆಟ್ಟಿ, ಮತ್ತು ರಿಷಭ್ ಶೆಟ್ಟಿ, ನಟಿ ಪೂಜಾ ಹೆಗ್ಡೆ ಸೇರಿದಂತೆ ತುಳು ರಂಗಭೂಮಿಯ ಅನೇಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಧಾರ್ಮಿಕ ಕ್ಷೇತ್ರದ ಪ್ರಮುಖರು ಕೂಡ ಬರಲಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಪಿಲಿ ನಲಿಕೆಯು ಸ್ಪರ್ಧೆಯೊಂದಿಗೆ ಅಶಕ್ತ ತಂಡಗಳ ನೆರವಿಗೂ ಸಹಕಾರಿಯಾಗಿದೆ. ಇಲ್ಲಿ ಮೊದಲ ಸ್ಥಾನ ಗಳಿಸಿದ ತಂಡ ಕುಣಿತಕ್ಕೆ ಡಿಸೆಂಬರ್‌ನಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಷ್ಟ್ರೀಯ ಜಾಂಬೂರಿಯಲ್ಲಿ ಅವಕಾಶ ನೀಡಲಾಗುವುದು. ಮುಂಬೈಯಲ್ಲಿ ನಡೆಯುವ ಗಣೇಶೋತ್ಸವ ಮೆರವಣಿಗೆಯಲ್ಲಿ ಹುಲಿ ಕುಣಿತಕ್ಕೆ ಅವಕಾಶ ನೀಡುವ ಭರವಸೆ ಲಭಿಸಿದೆ ಎಂದ ಅವರು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಹುಲಿ ಕುಣಿತ ಸೇರಿಸಬೇಕು, ವಿವಿಧ ಭಾಷೆಯ ಚಲನಚಿತ್ರಗಳಲ್ಲೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ತುಳು ಸಂಸ್ಖೃತಿ ಬಿಂಬಿಸುವ ಕಾಂತಾರ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.