ADVERTISEMENT

1348 ಕಿಂಡಿ ಅಣೆಕಟ್ಟೆಗೆ ಯೋಜನೆ

₹ 3,986 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಿದ ಸಣ್ಣ ನೀರಾವರಿ ಇಲಾಖೆ

ಸಂಧ್ಯಾ ಹೆಗಡೆ
Published 12 ಜನವರಿ 2021, 3:46 IST
Last Updated 12 ಜನವರಿ 2021, 3:46 IST
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪ ನಿಡ್ಡೋಡಿ ಗ್ರಾಮದ ಬ್ರಹ್ಮಸ್ಥಾನಕಟ್ಟದಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪ ನಿಡ್ಡೋಡಿ ಗ್ರಾಮದ ಬ್ರಹ್ಮಸ್ಥಾನಕಟ್ಟದಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆ   

ಮಂಗಳೂರು: ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಭಾಗವಾಗಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 1348 ಹೊಸ ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗಿದೆ. ಈ ಸಂಬಂಧ ಸಣ್ಣ ನೀರಾವರಿ ಇಲಾಖೆಯು ₹ 3,986.25 ಕೋಟಿ ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ.

2020–21ನೇ ಸಾಲಿನ ಬಜೆಟ್‌ನಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ, ಅಗತ್ಯವಿದ್ದಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಿಸಲು ಮಾಸ್ಟರ್‌ ಪ್ಲಾನ್ ಸಿದ್ಧಪಡಿಸುವ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯು, ಅಣೆಕಟ್ಟೆ ನಿರ್ಮಾಣ ಸಾಧ್ಯತೆಯ ಸ್ಥಳಗಳನ್ನು ಗುರುತಿಸಿ, ಬೃಹತ್ ಯೋಜನೆ ತಯಾರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 315 ಕಿಂಡಿ ಅಣೆಕಟ್ಟೆಗಳಿವೆ. ಹೆಚ್ಚುವರಿಯಾಗಿ 446 ಕಡೆಗಳಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಿಸಲು ₹ 1,511 ಕೋಟಿಯ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 424 ಕಾಮಗಾರಿಗಳ ₹ 1,025 ಕೋಟಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 466 ಕಾಮಗಾರಿಗಳ ₹ 1,409 ಕೋಟಿ ಯೋಜನೆ ರೂಪಿಸಲಾಗಿದೆ. ಪಯಸ್ವಿನಿ ನದಿ ಹಾಗೂ ಕುಮಾರಧಾರಾ ನದಿಗೆ ಅಡ್ಡಲಾಗಿ ಕೊಡಗು ಸೋಮವಾರ ಪೇಟೆಯಲ್ಲಿ ಒಟ್ಟು 12 ಕಾಮಗಾರಿ ನಡೆಸಲು ₹ 41 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಇವು ಅನುಷ್ಠಾನಗೊಂಡರೆ, 48 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಅನುಕೂಲವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಗೋಕುಲ ದಾಸ್ ತಿಳಿಸಿದರು.

ADVERTISEMENT

ಈ ಬೃಹತ್ ಯೋಜನೆಯನ್ನು ಐದು ವರ್ಷಗಳಲ್ಲಿ ಕಾರ್ಯಾನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ, ಪ್ರತಿವರ್ಷ ಅಂದಾಜು ₹ 265 ಕೋಟಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಒಂದು ಕಿಂಡಿ ಅಣೆಕಟ್ಟೆಯಿಂದ ಸುಮಾರು ಒಂದು ಕಿ.ಮೀ ದೂರದವರೆಗೆ ಜಲಸಂಗ್ರಹವಾಗುತ್ತದೆ. ಅದರ ಅಕ್ಕಪಕ್ಕದ ಜಮೀನುಗಳಲ್ಲಿ ತೇವಾಂಶ ಹೆಚ್ಚಿದರೆ, ಜಲಮೂಲಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

₹ 100 ಕೋಟಿ ವೆಚ್ಚದ ಯೋಜನೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಜಕ್ರಿಬೆಟ್ಟುದಲ್ಲಿ ₹ 100 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ತುಂಬೆ ಅಣೆಕಟ್ಟಿನ ಹಿನ್ನೀರು ಬಂದು ನಿಲ್ಲುವ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತದೆ. ಹರೇಕಳದಲ್ಲಿ ಈಗಾಗಲೇ ಒಂದು ಕಾಮಗಾರಿ ಪ್ರಗತಿಯಲ್ಲಿದೆ. ಪುತ್ತೂರಿನ ಬೆಳ್ಳಿಪ್ಪಾಡಿ ಸಮೀಪ ಕುಮಾರಧಾರಾ ನದಿಗೆ ಅಡ್ಡಲಾಗಿ ₹ 60 ಕೋಟಿ ಕಾಮಗಾರಿ, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ₹ 60 ಕೋಟಿ ವೆಚ್ಚದ ಯೋಜನೆ ಇವು ಜಿಲ್ಲೆಯ ಪ್ರಮುಖ ಕಾಮಗಾರಿಗಳಾಗಿವೆ ಎಂದು ಗೋಕುಲದಾಸ್ ತಿಳಿಸಿದರು.

ಜನಪ್ರತಿನಿಧಿಗಳ ಸಲಹೆ ಪಡೆದು ಹೊಸ ಕಿಂಡಿ ಅಣೆಕಟ್ಟೆ ನಿರ್ಮಾಣದ ಸ್ಥಳ ಗುರುತಿಸಿ, ಪ್ರಸ್ತಾವವನ್ನು ಅಕ್ಟೋಬರ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಗೋಕುಲದಾಸ್, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.