ಪುತ್ತೂರು: ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆಯುವ ಉದ್ದೇಶದೊಂದಿಗೆ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿ ಶಮಿಕಾ ಎಂ.ಕೆ ವಿಶೇಷ ಸಾಧನೆ ಮಾಡಲು ಮುಂದಾಗಿದ್ದು, ಕಣ್ಣಿಗೆ ಪಟ್ಟಿ ಕಟ್ಟಿಕೊಂಡು 24 ಗಂಟೆಗಳ ಕಾಲ ಸ್ಯಾಂಡ್ ಆರ್ಟ್ ಬಿಡಿಸುವ ಸಾಹಸ ನಡೆಸಲಿದ್ದಾರೆ.
ಡಿಸೆಂಬರ್ 6 ಮತ್ತು 7ರಂದು ಪುತ್ತೂರಿನ ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಸ್ಯಾಂಡ್ ಆರ್ಟ್ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಪುತ್ತೂರಿನ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ, ಚಿತ್ರ ಕಲಾವಿದ ಪ್ರವೀಣ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿ ಕೇಶವ ಮತ್ತು ಗೀತಾಮಣಿ ದಂಪತಿಯ ಪುತ್ರಿ ಶಮಿಕಾ ಅವರು ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯ ಕಲಾ ವಿದ್ಯಾರ್ಥಿಯಾಗಿದ್ದು, ಈಕೆ 4 ವರ್ಷಗಳ ಹಿಂದೆ ಕಣ್ಣು ಮುಚ್ಚಿಕೊಂಡು ಓದುವ ಗಾಂಧಾರಿ ವಿದ್ಯೆ ಅಭ್ಯಾಸ ರೂಢಿಗತ ಮಾಡಿಕೊಂಡಿದ್ದಾಳೆ. 4 ತಿಂಗಳಿಂದ ಈ ವಿದ್ಯೆಯ ಮೂಲಕವೇ ಸ್ಯಾಂಡ್ ಆರ್ಟ್ (ಮರಳು ಚಿತ್ರ) ಬಿಡಿಸುವುದನ್ನು ಕಲಿಯುತ್ತಿದ್ದಾಳೆ. ಇದೀಗ ದಿನದ 24 ಗಂಟೆಯೂ ನಿರಂತರ ಕಣ್ಣು ಮುಚ್ಚಿಕೊಂಡು ಮರಳು ಚಿತ್ರ ಬಿಡಿಸುವುದನ್ನು ಕರಗತ ಮಾಡಿಕೊಂಡಿದ್ದು, ಇದನ್ನು ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಿ.6ರಂದು ಮಧ್ಯಾಹ್ನ 12 ಗಂಟೆಗೆ ಚಿತ್ರಬಿಡಿಸಲು ಆರಂಭಿಸುವ ಶಮಿಕಾ ಡಿ.7ರಂದು ಮಧ್ಯಾಹ್ನ 12 ಗಂಟೆ ತನಕ ಮುಂದುವರಿಸಲಿದ್ದಾರೆ. ಈ ಅವಧಿಯಲ್ಲಿ ಪ್ರತೀ 3 ಗಂಟೆಗೊಮ್ಮೆ 15 ನಿಮಿಷಗಳ ಬಿಡುವು ಪಡೆಯುತ್ತಾಳೆ. ಹಿನ್ನೆಲೆ ಗಾಯಕರು ಹಾಡುಗಳನ್ನು ಹಾಡುತ್ತಿದ್ದಂತೆ ಶಮಿಕಾ ಹಾಡಿನ ಭಾವಕ್ಕೆ ಸರಿಯಾದ ಚಿತ್ರವನ್ನು ಮರಳಿನ ಮೇಲೆ ಬಿಡಿಸುತ್ತಾಳೆ. ಒಂದು ಹಾಡು ಮುಗಿಯುವಾಗ ಒಂದು ಚಿತ್ರವೂ ಸಂಪೂರ್ಣಗೊಳ್ಳುತ್ತದೆ. 24 ಗಂಟೆಯಲ್ಲಿ ಸುಮಾರು 300 ಹಾಡುಗಳನ್ನು ಗಾಯಕರ ತಂಡ ಹಾಡಲಿದ್ದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಶಮಿಕಾ ಚಿತ್ರ ಬಿಡಿಸುತ್ತಾಳೆ. ಪ್ರತೀ ಚಿತ್ರ ಬರೆದ ಕೂಡಲೇ ಅದನ್ನು ಅಳಿಸಿ ಅದೇ ಮರಳಿನ ಮೇಲೆ ಮತ್ತೊಂದು ಚಿತ್ರ ಬಿಡಿಸುತ್ತಾಳೆ. 24 ಗಂಟೆಗಳ ಪ್ರದರ್ಶವನ್ನು ಪೂರ್ತಿ ಚಿತ್ರೀಕರಣ ಮಾಡಿಕೊಳ್ಳಲಾಗುತ್ತದೆ. ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಡಾ.ಮನೀಷ್ ವೈಶ್ಣೋಯಿ ಅವರು ಭಾಗವಹಿಸಿ ಶಮಿಕಾಳ ಸಾಧನೆಯನ್ನು ದಾಖಲು ಮಾಡಿಕೊಳ್ಳಲಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕಲಿಕೆ ಆರಂಭ:
ಶಮಿಕಾಳ ತಂದೆ ಕೇಶವ ಪಿ.ಎಂ ಅವರು ಮಾತನಾಡಿ, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದಾಗ ಶಮಿಕಾ ಗಾಂಧಾರಿ ವಿದ್ಯೆ ಕಲಿಯಲು ಆರಂಭಿಸಿದ್ದು, ಮೂಡಿಗೆರೆಯ ಸತೀಶ್ ಪದ್ಮನಾಭ್ ಎಂಬ ಗುರುಗಳಿಂದ ಆನ್‌ಲೈನ್ ಮೂಲಕ ಕಲಿತುಕೊಂಡ ವಿದ್ಯೆಯನ್ನು ಸತತ ಅಭ್ಯಾಸದ ಮೂಲಕ ಅಭಿವೃದ್ಧಿ ಮಾಡಿಕೊಂಡಿದ್ದಾಳೆ. ಪ್ರಸ್ತುತ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಗೆ ಚಿತ್ರಕಲಾ ವಿದ್ಯಾರ್ಥಿನಿಯಾಗಿ ಸೇರಿದ ಮೇಲೆ ಗಾಂಧಾರಿ ವಿದ್ಯೆ ಬಳಸಿಕೊಂಡು ಮರಳು ಚಿತ್ರ ಬಿಡಿಸುವುದನ್ನೂ ಅಭ್ಯಾಸ ಮಾಡಿದ್ದಾಳೆ ಎಂದರು. ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾ ಲಕ್ಷ್ಮೀ ಕೆದಿಮಾರು, ಸದಸ್ಯ ಬಾಲಸುಬ್ರಹ್ಮಣ್ಯ ಶರ್ಮ, ಶಮಿಕಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.