ADVERTISEMENT

ದ.ಕ: 5 ವರ್ಷಗಳಲ್ಲಿ 50 ಯಶಸ್ವಿ ಉದ್ದಿಮೆ ಗುರಿ

‘ಬೊಲ್ಪು’ ನವೋದ್ಯಮಿಗಳೊಂದಿಗೆ ಸಂವಾದದಲ್ಲಿ ಕ್ಯಾ.ಚೌಟ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:29 IST
Last Updated 1 ಮಾರ್ಚ್ 2026, 8:29 IST
ಮಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ‘ಬೊಲ್ಪು’ ನವೋದ್ಯಮಿಗಳ ಜೊತೆಗಿನ ಸಂವಾದದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ನವೋದ್ಯಮಿಗಳು ಹಾಗೂ ತಜ್ಞರು ಭಾಗವಹಿಸಿದ್ದರು
ಮಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ‘ಬೊಲ್ಪು’ ನವೋದ್ಯಮಿಗಳ ಜೊತೆಗಿನ ಸಂವಾದದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ನವೋದ್ಯಮಿಗಳು ಹಾಗೂ ತಜ್ಞರು ಭಾಗವಹಿಸಿದ್ದರು   

ಮಂಗಳೂರು: ‘ದಕ್ಷಿಣ ಕನ್ನಡವನ್ನು ಮುಂದಿನ 5 ವರ್ಷಗಳಲ್ಲಿ ದೇಶದ ಪ್ರಮುಖ ಉದ್ಯಮ ಕೇಂದ್ರವನ್ನಾಗಿ ರೂಪಿಸುವುದು ಹಾಗೂ ಕನಿಷ್ಠ 50 ಯಶಸ್ವಿ ನವೋದ್ಯಮಗಳನ್ನು ಕಟ್ಟಿ ಬೆಳೆಸುವ ಗುರಿ ಬೊಲ್ಪು ಯೋಜನೆಯದು’ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.

‘ಬೊಲ್ಪು - ಅವಕಾಶ ನವೋದಯʼ ಯೋಜನೆಗೆ ಆಯ್ಕೆಯಾದ ನವೋದ್ಯಮಗಳ ವಿಭಿನ್ನ ಆಲೋಚನೆಗಳಿಗೆ ಸಂಬಂಧಿಸಿದ ಸಂವಾದದಲ್ಲಿ ಶನಿವಾರ ಅವರು ಮಾತನಾಡಿದರು. 

'ಸ್ಟಾರ್ಟ್-ಅಪ್ ಇಂಡಿಯಾ' 11ನೇ ವರ್ಷಾಚರಣೆ ಸಂದರ್ಭದಲ್ಲಿ 11 ವಿಭಿನ್ನ ಆಲೋಚನೆಗಳನ್ನು ಬೊಲ್ಪು ಯೋಜನೆಗೆ ಆಯ್ಕೆ ಮಾಡಲಾಗಿದೆ.  ನವೋದ್ಯಮಿಗಳು ಅಡೆ-ತಡೆ, ಸವಾಲುಗಳಿಗೆ ಹಿಂಜರಿಯದೇ ಸಾಧ್ಯತೆಗಳತ್ತ ಗಮನಹರಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ. ಯಶಸ್ಸು ಅಥವಾ ವೈಫಲ್ಯ ವ್ಯಕ್ತಿಯ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ‘ ಎಂದರು.  

ADVERTISEMENT

ಈ ಯೋಜನೆಯಲ್ಲಿ ಶೇ 50ರಷ್ಟು ಮಹಿಳಾ ಉದ್ಯಮಿಗಳದಾಗಿರಬೇಕು ಎಂಬ ಆಶಯ ನನ್ನದು ಎಂದು ಸಂಸದ ತಿಳಿಸಿದರು. 

ನವೋದ್ಯಮ ಆಲೋಚನೆಗಳ 850ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಅಂತಿಮವಾಗಿ 11 ವಿಭಿನ್ನ ಹಾಗೂ ನವೀನ ಆಲೋಚನೆಗಳನ್ನು ಆಯ್ಕೆ ಮಾಡಲಾಗಿದೆ. ನೀಲ್ ಕೆವಿನ್ ಮಾರ್ಟಿಸ್ ಅವರ ಬ್ಲಾಕ್‌ಚೈನ್ ತಂತ್ರಜ್ಞಾನ ಆಧರಿಸಿದ ‘ಝಪ್ಪಲ್ ಲ್ಯಾಬ್ಸ್’ , ಅಭಿನಂದನ ಅವರ ಡೇರಿ ಪಾನೀಯಗಳ ಕಲ್ಪನೆ ಆಧರಿಸಿದ ಸತ್ವ ಬಿವರೇಜಸ್, ಸಿಂಧೂರ ಟಿ.ಪಿ ಅವರ ಸಂಸ್ಕೃತಿ ಸಂರಕ್ಷಣೆಯ ಧ್ಯೇಯೋದ್ದೇಶ ಹೊಂದಿರುವ ‘ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ’ ಪರಿಕಲ್ಪನೆಗಳು ಗಮನ ಸೆಳೆದಿವೆ. ಶೇ 85ರಷ್ಟು ಮಹಿಳಾ ಉದ್ಯೋಗಿಗಳ ಸಬಲೀಕರಣದ ಉದ್ದೇಶ ಹೊಂದಿರುವ ಜೂಸ್ ಬಾಟಲ್ ಆಲೋಚನೆಯನ್ನು ಪ್ರೀತಿ ಮತ್ತು ಗಣೇಶ್ ನಾಯಕ್ ಪ್ರಸ್ತುತಿಪಡಿಸಿದರು.  

ತಂತ್ರಜ್ಞಾನ ಮತ್ತು ಪರಿಸರ ವಿಭಾಗದಲ್ಲಿ ಡಾ.ಚಂದ್ರಿಕಾ ತಂತ್ರಿ ಅವರ ‘ಎಕೋಪಾಲಿ ಬಯಾಟೆಕ್’, ಡಾ.ನಿಖಿಲ್ ಎಸ್. ಶೆಟ್ಟಿ ಅವರ ‘ಬಯೋಮೇಡ್ ಇಂಪ್ಲಾಂಟ್ಸ್’ ಮತ್ತು ಸಾಕ್ಷತ್ ರೈ ಕೆ. ಹಾಗೂ ದುರ್ಗಾದಾಸ್ ಶೆಟ್ಟಿ ಅವರ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ಸೇವೆ ‘ಅನಾಹತಂ ಐ’  ಅಂತಿಮ ಹಂತಕ್ಕೆ ಆಯ್ಕೆಯಾಗಿವೆ.  ಯುವ ಎಂಜಿನಿಯರ್ ಶೇಷಪ್ರಸಾದ್ ಭಟ್ ಅವರ ವ್ಯಾನಿಕಾ ಇನ್ನೋವೇಶನ್ಸ್, ವಸಂತ್ ಮಾಧವ್ ಕಾಮತ್ ಅವರ ಹೈಡ್ರೋಗ್ರೀನ್ಸ್, ಮಿಥುಲ್ ದಾಸ್ ಅವರ ದಾಸಪೈಲಟ್ ಡ್ರೋನ್ ತಂತ್ರಜ್ಞಾನದ ಕಲ್ಪನೆ ಮತ್ತು ಗೌರವ್ ಗಣೇಶ್ ಶೆಟ್ಟಿ ಅವರ ಕೆನರಾ ಫಾರ್ಮ್ಸ್ ರಾಸಾಯನಿಕ ಮುಕ್ತ ಡೇರಿ ಉತ್ಪನ್ನಗಳು ಮುಂದಿನ ಯಶೋಗಾಥೆಯ ಭಾಗವಾಗಲು ಸಜ್ಜಾಗಿವೆ.

ಆಯ್ಕೆಯಾದ 11 ನವೋದ್ಯಮಿಗಳಿಗೆ ತಜ್ಞರ ಮೂಲಕ ನಿರಂತರ ಮಾರ್ಗದರ್ಶನ ನೀಡಿ, ಅವರ ಆಲೋಚನೆಗಳನ್ನು ದೃಢ ಉದ್ಯಮಗಳನ್ನಾಗಿ  ಬೆಳೆಸುವುದಕ್ಕೆ ಬೊಲ್ಪು ತಂಡವು ಬೆಂಬಲ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.