ADVERTISEMENT

ಎಸ್‌ಡಿಪಿಐ, ಪಿಎಫ್‌ಐ ಮುಖಂಡರ ಬಂಧನ

ಕಲ್ಲಡ್ಕದಲ್ಲಿ ಕೊಲೆ ಆರೋಪಿ ಕೇಶವನಿಗೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 7:42 IST
Last Updated 4 ಜನವರಿ 2018, 7:42 IST

ಮಂಗಳೂರು: ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್‌ ಕರೋಪಾಡಿ ಕೊಲೆ ಪ್ರಕರಣದ ಆರೋಪಿ ಕೇಶವ ಎಂಬಾತನ ಮೇಲೆ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ಡಿಸೆಂಬರ್ 26ರಂದು ನಡೆದ  ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಎಸ್‌ಡಿಪಿಐ ಮತ್ತು ಪಿಎಫ್‌ಐನ ಮೂವರು ಕಾರ್ಯಕರ್ತರನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಸದ್ಯ ಕಲ್ಲಡ್ಕದಲ್ಲಿ ನೆಲೆಸಿದ್ದು, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾದ ಆರೋಗ್ಯ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಂಗಳೂರಿನ ಮೊಹಮ್ಮದ್ ಇಕ್ಬಾಲ್‌ ಅಲಿಯಾಸ್‌ ಬೂಟ್‌ ಇಕ್ಬಾಲ್‌ (47), ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (‍ಪಿಎಫ್‌ಐ) ಬಂದರು ಘಟಕದಲ್ಲಿ ಸಕ್ರಿಯನಾಗಿರುವ ಈತನ ಮಗ ನಿಝಾಂ (21) ಹಾಗೂ ಆಲಡ್ಕ ಪಿಎಫ್‌ಐ ಘಟಕದಲ್ಲಿ ಸಕ್ರಿಯನಾಗಿರುವ ಪಾಣೆಮಂಗಳೂರು ನಿವಾಸಿ ಮೊಹಮ್ಮದ್ ಷರೀಫ್‌ (22) ಎಂಬುವವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಡಿ.26ರಂದು ಕಲ್ಲಡ್ಕದ ವಿಟ್ಲ ರಸ್ತೆ ಜಂಕ್ಷನ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕೇಶವನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಮಾಡಿ ಪರಾರಿಯಾಗಿದ್ದರು. ಕಲ್ಲಡ್ಕ ಠಾಣೆಯ ರೌಡಿ ಪಟ್ಟಿಯಲ್ಲಿರುವ ಕಲ್ಲಡ್ಕ ನಿವಾಸಿ ಚನ್ನಾ ಫಾರೂಕ್‌ ಎಂಬಾತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದವ. ನಿಝಾಂ ಆತನ ಜೊತೆಗಿದ್ದ. ಉಳಿದವರು ಅಪರಾಧ ಸಂಚು, ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ನೀಡಿರುವುದು ಮತ್ತು ಅಪರಾಧ ಎಸಗಲು ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಕೋರಲಾಗುವುದು. ಚನ್ನಾ ಫಾರೂಕ್‌ ಸೇರಿದಂತೆ ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.