ADVERTISEMENT

ಸುರತ್ಕಲ್‌ –ಕಾಟಿಪಳ್ಳ ಬಂದ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 5:38 IST
Last Updated 5 ಜನವರಿ 2018, 5:38 IST
ಸುರತ್ಕಲ್‌ ಮುಖ್ಯ ರಸ್ತೆಯಲ್ಲಿ ಗುರುವಾರ ವಾಹನಗಳ ಸಂಚಾರ ವಿರಳವಾಗಿತ್ತು.
ಸುರತ್ಕಲ್‌ ಮುಖ್ಯ ರಸ್ತೆಯಲ್ಲಿ ಗುರುವಾರ ವಾಹನಗಳ ಸಂಚಾರ ವಿರಳವಾಗಿತ್ತು.   

ಮಂಗಳೂರು: ಕಾಟಿಪಳ್ಳದ ದೀಪಕ್‌ ರಾವ್‌ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆ, ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಹಿಂದೂ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಸುರತ್ಕಲ್‌–ಕಾಟಿಪಳ್ಳ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

ಬುಧವಾರ ಸಂಜೆಯಿಂದಲೇ ಕಾಟಿಪಳ್ಳ, ಸುರತ್ಕಲ್‌ ಪರಿಸರದಲ್ಲಿ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಗುರುವಾರವೂ ಯಾವುದೇ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಸುರತ್ಕಲ್‌ನಲ್ಲಿ ವಾಹನಗಳ ಸಂಚಾರವೂ ವಿರಳವಾಗಿತ್ತು. ಅಟೋ ರಿಕ್ಷಾ, ಬಾಡಿಗೆ ವಾಹನಗಳೂ ರಸ್ತೆಗೆ ಇಳಿಯಲಿಲ್ಲ.

ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು, ಬುಧವಾರ ರಾತ್ರಿ ಯಿಂದಲೇ ಸುರತ್ಕಲ್‌ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಿದ್ದರು. ಎಲ್ಲೆಡೆಯೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ನಗರದ ಉರ್ವ ಸ್ಟೋರ್‌ನಿಂದಲೇ ಪೊಲೀಸ್‌ ಬಂದೋಬಸ್ತ್‌ ತೀವ್ರವಾಗಿತ್ತು.

ADVERTISEMENT

ಕೂಳೂರು, ಪಣಂಬೂರು, ಸುರತ್ಕಲ್‌, ಕಾಟಿಪಳ್ಳ ಸೇರಿದಂತೆ ಮಾರ್ಗದುದ್ದಕ್ಕೂ 500ಕ್ಕೂ ಹೆಚ್ಚು ಪೊಲೀಸರು, ವಾಹನಗಳೊಂದಿಗೆ ಬಂದೋಬಸ್ತ್‌ನಲ್ಲಿ ನಿರತರಾಗಿದ್ದರು. ಈ ಮೊದಲು ದೀಪಕ್‌ ರಾವ್‌ ಮೃತದೇಹದ ಮೆರವಣಿಗೆ ನಡೆ ಸಲು ಹಿಂದೂ ಸಂಘಟನೆಗಳು ನಿರ್ಧರಿಸಿ ದ್ದವು. ಆದರೆ, ಗುರುವಾರ ಬೆಳಿಗ್ಗೆ ಪೊಲೀಸರೇ, ದೀಪಕ್‌ ರಾವ್‌ ಅವರ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಕಾಟಿಪಳ್ಳಕ್ಕೆ ಕೊಂಡೊಯ್ದರು. ಹೀಗಾಗಿ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಗೂಡಂಗಡಿಗಳು ಬಂದ್‌ ಆಗಿದ್ದರಿಂದ ಬಂದೋಬಸ್ತ್‌ಗೆ ನಿಯೋ ಜನೆಗೊಂಡಿದ್ದ ಪೊಲೀಸರು, ಚಹಾ, ತಿಂಡಿಗೆ ಪರದಾಡುವಂತಾಯಿತು. ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು.

ಡಿವೈಎಫ್‌ಐ ಖಂಡನೆ: ಸುರತ್ಕಲ್ ಸಮೀಪದ ಸೂರಿಂಜೆ ನಿವಾಸಿ ದೀಪಕ್ ಕೊಲೆಯೊಂದಿಗೆ ಮತ್ತೊಮ್ಮೆ ಮಂಗಳೂರು ಉದ್ವಿಗ್ನ ಸ್ಥಿತಿಯನ್ನು ತಲುಪಿದೆ. ಪರಸ್ಪರ ಎರಡು ಧರ್ಮ ರಾಜಕಾರಣದ ಹುನ್ನಾರಗಳಿಗೆ ದುಡಿದು ಬದುಕುವ, ತಮ್ಮ ಮನೆಗೆ ಆಧಾರವಾಗಿದ್ದ ಯುವಕ ಬಲಿ ಯಾಗಿರುವುದು ದುರಂತ. ಕೋಮು ರಾಜಕಾರಣದ ಬೇಗುದಿಗೆ, ಕ್ಷುಲ್ಲಕ ಕಾರಣಗಳಿಗಾಗಿ ನಡೆಯುವ ಪ್ರೇರಿತ ಹತ್ಯೆಯು ಖಂಡನೀಯ. ಈ ಅಮಾನವೀಯ ಹತ್ಯೆಯನ್ನು ಖಂಡಿಸು ವುದಾಗಿ ಡಿವೈಎಫ್‍ಐ ಜಿಲ್ಲಾ ಸಮಿತಿ ತಿಳಿಸಿದೆ.

ರಾಜಕೀಯ ತಂತ್ರಗಳಿಗೆ ಜಿಲ್ಲೆಯಲ್ಲಿ ಸಾವುಗಳನ್ನು ಬಯಸುವ ರಾಜಕಾರಣ ಮತ್ತು ಸತ್ತ ಕಾರ್ಯಕರ್ತರ ಸಾವಿಗೆ ಸೇಡು ಎಂಬಂತೆ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನದ ರಾಜಕಾರಣಿಗಳ ಕ್ರೂರ ಮನಸ್ಸುಗಳನ್ನು ಜಿಲ್ಲೆಯ ಜನತೆ ಅರ್ಥೈಸಿಕೊಳ್ಳಬೇಕು. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದವನ್ನು ಉಳಿಸಬೇಕಾಗಿದೆ ಎಂದು ಹೇಳಿದೆ.

ದೀಪಕನ ಹತ್ಯೆಗೈದ ಹಂತಕರನ್ನು ಕೆಲವೇ ಗಂಟೆಗಳೊಳಗೆ ಬಂಧಿಸಿದ ಪೊಲೀಸರ ಕ್ರಮ ಶ್ಲಾಘನೀಯ. ಹಂತ ಕರನ್ನು ಕಠಿಣ ಶಿಕ್ಷೆ ಗೊಳಪಡಿಸಬೇಕು. ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.