ADVERTISEMENT

ಹೊಸ ಕೃಷಿ ರಫ್ತು ನೀತಿ ಜಾರಿ: ಪ್ರಭು

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 6:48 IST
Last Updated 22 ಜನವರಿ 2018, 6:48 IST
ಪುತ್ತೂರಿನ ಕ್ಯಾಂಪ್ಕೊ ಸಂಸ್ಥೆಯಲ್ಲಿ ಭಾನುವಾರ ನಡೆದ ನೂತನ ಸೌಲಭ್ಯ ಸೌಧ ಕಟ್ಟಡದ ಉದ್ಘಾಟನೆ ಹಾಗೂ ವಾರಣಾಶಿ ಸುಬ್ರಾಯ ಭಟ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರು ಉದ್ಘಾಟಿಸಿದರು.
ಪುತ್ತೂರಿನ ಕ್ಯಾಂಪ್ಕೊ ಸಂಸ್ಥೆಯಲ್ಲಿ ಭಾನುವಾರ ನಡೆದ ನೂತನ ಸೌಲಭ್ಯ ಸೌಧ ಕಟ್ಟಡದ ಉದ್ಘಾಟನೆ ಹಾಗೂ ವಾರಣಾಶಿ ಸುಬ್ರಾಯ ಭಟ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರು ಉದ್ಘಾಟಿಸಿದರು.   

ಪುತ್ತೂರು: ದೇಶದ ರೈತರಿಗೆ ನೆರವಾ ಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕೃಷಿ ರಫ್ತು ನೀತಿಯನ್ನು ಜಾರಿಗೆ ತರಲಿದೆ. ಈ ಬಗ್ಗೆ ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಹೇಳಿದರು.

ಇಲ್ಲಿನ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ ಆವರಣದಲ್ಲಿ ₹ 13 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ 4 ಅಂತಸ್ತಿನ ‘ಸೌಲಭ್ಯ ಸೌಧ' ಕಟ್ಟಡ ವನ್ನು ಭಾನುವಾರ ಉದ್ಘಾಟಿಸಿ ಹಾಗೂ ಕ್ಯಾಂಪ್ಕೊ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಪ್ರತಿಮೆ ಅನಾ ವರಣ ಮಾಡಿ ಮಾತನಾಡಿದರು.

ರೈತರು ಬೆಳೆಯುವ ಕೃಷಿ ಆಹಾರೋತ್ಪನ್ನಗಳಿಗೆ ಉತ್ತಮ ಧಾರಣೆ ಯೊಂದಿಗೆ ರೈತರ ಜೀವನಕ್ಕೊಂದು ಮೌಲ್ಯ ಸಿಗುವಂತಾಗಬೇಕು. ಇದಕ್ಕಾಗಿ ಅಂತರರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣವಾಗಬೇಕು ಎಂಬುವುದು ಹೊಸ ಕೃಷಿ ರಘ್ತು ನೀತಿಯ ಹಿಂದಿರುವ ಉದ್ದೇಶವಾಗಿದೆ ಎಂದ ಅವರು, ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಕೃಷಿ ರಫ್ತು ನೀತಿ ತಯಾರು ಮಾಡಲಾಗುತ್ತಿದೆ. ಈಗಾಗಲೇ ಕರಡು ಸಿದ್ಧವಾಗಿದ್ದು, ಇನ್ನು ಕೆಲವೇ ಸಮಯದಲ್ಲಿ ಅದನ್ನು ಆನ್‍ಲೈನ್‍ಗೆ ಅಳವಡಿಸಾಗುವುದು ಎಂದರು.

ADVERTISEMENT

ರಾಷ್ಟ್ರೀಯ ರಬ್ಬರ್ ನೀತಿ ಜಾರಿ: ಪ್ರಸ್ತುತ ರಬ್ಬರ್ ಬೆಳೆಗಾರರು ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎನ್ನುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ರಬ್ಬರ್ ನೀತಿ ಘೋಷಣೆ ಮಾಡುವ ಮೂಲಕ ಸ್ಥಿರತೆ ಕಾಪಾಡುವ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿ ಈ ನೀತಿಯನ್ನು ಘೋಷಣೆ ಮಾಡಲಾಗುವುದು. ಇದರೊಂದಿಗೆ ದೇಶದಲ್ಲಿ ಬೆಳೆಯುವ ಇತರ ಸಾಂಬಾರ ಪದಾರ್ಥಗಳಿಗೂ ಒಂದು ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಸಚಿವ ಸುರೇಶ್‌ ಪ್ರಭು ಹೇಳಿದರು.

ಸಹಕಾರಿ ಭಾರತಿ ರಾಷ್ಟ್ರೀಯ ಅಧ್ಯಕ್ಷ ಜ್ಯೋತೀಂದ್ರ ಭಾಯ್ ಮೆಹ್ತಾ ಮಾತನಾಡಿ, ಕ್ಯಾಂಪ್ಕೊ ಸಹಕಾರಿ ಸಂಸ್ಥೆಯ ಈ ನೂತನ ಕಟ್ಟಡ ಕಾರ್ಪೊ ರೇಟ್ ಮಟ್ಟಕ್ಕೆ ಬೆಳೆದಿದೆ. ಇವತ್ತು ಕೋ- ಆಪರೇಟಿವ್‍ಗಳು ಕಾರ್ಪೊರೇಟ್ ಆಗಬೇಕಿದೆ. ಕಾರ್ಪೊರೇಟ್‍ಗಳು ಕೋ ಆಪರೇಟಿವ್ ಆಗಬೇಕಿದೆ. ಸಹಕಾರಿ ಕ್ಷೇತ್ರ ಜನತೆಯ ಪಾಲಿಗೆ ಅನಿವಾರ್ಯತೆ ಎಂಬ ಧ್ಯೇಯವಾಕ್ಯ ಮೊಳಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ರೈತರು ಸ್ವಾಭಿಮಾನಿಗಳಾಗಿ ಬದುಕುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ರೈತರ ಸಂಸ್ಥೆ ಯಾಗಿರುವ ಕ್ಯಾಂಪ್ಕೊ ರೈತರ ಪಾಲಿಗೆ ಒಂದು 'ದೇಗುಲ'ವಾಗಿದೆ. ಕೇರಳ ಮತ್ತು ಕರ್ನಾಟಕದ ರೈತರ ಶ್ರಮದ ಫಲವಾಗಿ ಇಂದು ಅಂತರಾಷ್ಟ್ರೀಯ ನೆಲೆಯಲ್ಲಿ ಕ್ಯಾಂಪ್ಕೊ ಸ್ಥಾನಗಳಿಸಿದ್ದು, ಸಂಸ್ಥೆಗೆ ದೊರೆತ ಪ್ರಶಸ್ತಿ ರೈತರಿಗೆ ಅರ್ಪಣೆಯಾಗುತ್ತದೆ ಎಂದು ಹೇಳಿದರು.

ಕಾರ್ಪೋರೇಟ್ ವ್ಯವಸ್ಥೆಗೆ ಸಮಾನ ವಾಗಿ ಬೆಳೆದು ನಿಂತಿರುವ ಕ್ಯಾಂಪ್ಕೊ 'ಸ್ವಾಭಿಮಾನಿ ರೈತ'ರ ಹೆಮ್ಮೆಯ ಸಹಕಾರಿ ಸಂಸ್ಥೆಯಾಗಿದೆ ಎಂದರು. ಮಾಡನ್ನೂರು ಗ್ರಾಮದ ಕಾವು ಎಂಬಲ್ಲಿ ನಿರ್ಮಿಸಲುದ್ದೇಶಿಸಿರುವ ಕಾಳು ಮೆಣಸು ಸಂಸ್ಕರಣಾ ಘಟಕ ಮತ್ತು ಅಡಿಕೆ ಮತ್ತು ರಬ್ಬರ್ ಗೋದಾಮು ಕಟ್ಟಡಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಶಂಕುಸ್ಥಾಪನೆ ನೆರವೇ ರಿಸಿದರು. ಶಾಸಕಿ ಶಕುಂತಳಾ ಶೆಟ್ಟಿ ಅವರು ಮೌಲ್ಯಯುತ ಚಾಕೊಲೇಟ್‌ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಇದ್ದರು. ಸಚಿವ ಸುರೇಶ್ ಪ್ರಭು ದಂಪತಿ ಯನ್ನು ಸನ್ಮಾನಿಸಲಾಯಿತು.

ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾ ಯಣ ಖಂಡಿಗೆ ಸ್ವಾಗತಿಸಿದರು. ವ್ಯವ ಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ವಂದಿಸಿದರು. ಸಂಸ್ಥೆಯ ಉದ್ಯೋಗಿ ಜೆನಿತಾ ಹಾಗೂ ವಿವೇಕಾನಂದ ಕಾಲೇಜಿನ ಹರಿಪ್ರಸಾದ್ ನಿರೂಪಿಸಿದರು.

ಕ್ಯಾಂಪ್ಕೊ ಆಧುನಿಕ ಮಂದಿರ
ಜನ ಮಂದಿರ, ಮಸೀದಿ, ಚರ್ಚ್‍ಗಳಿಗೆ ಹೋಗ್ತಾರೆ. ಮುಂದಿನ ದಿನಗಳಲ್ಲಿ ರೈತರು ಕ್ಯಾಂಪ್ಕೋಗೆ ಬಂದು ಇದುವೇ ನಮ್ಮ ಮಂದಿರ ಎನ್ನುವ ಕಾಲ ಬರಲಿದೆ. ಇದೊಂದು `ಆಧುನಿಕ ಮಂದಿರ' ಎಂದ ಸಚಿವ ಸುರೇಶ್ ಪ್ರಭು ಅವರು ನಾನು ಈ ಆಧುನಿಕ ಮಂದಿರಕ್ಕೆ ಪ್ರಣಾಮ ಸಲ್ಲಿಸುತ್ತೇನೆ. ಸಹಕಾರಿ ರಂಗದಲ್ಲಿ ಇಂಥದೊಂದು ಮೇರು ಆಸ್ತಿ ಸೃಷ್ಟಿಸಿರುವುದು ದೇಶಕ್ಕೆ ಮಾದರಿ ಎಂದರು.

* * 

ಕೃಷಿ ರಫ್ತು ನೀತಿಯ ಕಾಯ್ದೆ ಜಾರಿಗೆ ಬಂದ ಮೇಲೆ ರೈತರು ತಮ್ಮ ಬೆಳೆಗಳ ರಫ್ತು ಮಾರುಕಟ್ಟೆ ಬಗ್ಗೆ ಯಾವುದೇ ಚಿಂತೆ ಮಾಡಬೇಕಿಲ್ಲ. ಎಲ್ಲ ವ್ಯವಸ್ಥೆಯನ್ನು ಸರ್ಕಾರವೇ ಮಾಡಿಕೊಡಲಿದೆ
ಸುರೇಶ್‌ ಪ್ರಭು,ಕೇಂದ್ರ ವಾಣಿಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.