ADVERTISEMENT

‘ಮನುಷ್ಯ ಮನುಷ್ಯನಾಗಿ ಬದುಕುವುದು ಮುಖ್ಯ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 5:20 IST
Last Updated 2 ಫೆಬ್ರುವರಿ 2018, 5:20 IST

ಮಂಗಳೂರು: ‘ಮನುಷ್ಯ ಮೊದಲು ಮನುಷ್ಯನಾಗಿ ಬದುಕಲು ಕಲಿಯಬೇಕು. ಆ ಮೂಲಕ ವಚನಕಾರರ ಸಂದೇಶವನ್ನು ಪಾಲಿಸಿ ಮನುಷ್ಯಧರ್ಮದ ಕಲ್ಪನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ. ನಾಗಪ್ಪಗೌಡ ಆರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯಕ್ತ ಆಶ್ರಯದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ ಹಾಗೂ ಅಂಬಿಗರ ಚೌಡಯ್ಯ ಜಯಂತಿಯ ಕುರಿತು ಉಪನ್ಯಾಸ ನೀಡಿದರು.

ಇಂದು ಜಾತಿ ಧರ್ಮಗಳ ಹೆಸರಿನಲ್ಲಿ ಅನ್ಯಾಯಗಳು ನಡೆಯುತ್ತಿವೆ. ವಚನಗಳು ಮಾನವ ಧರ್ಮವನ್ನು ಹುಟ್ಟುಹಾಕಲು ಮಾಡಿದ ಪ್ರಯತ್ನವನ್ನು ಎಲ್ಲರೂ ಇಂದು ಮರೆತಿದ್ದಾರೆ. ಇಡೀ ಜಗತ್ತಿನಲ್ಲಿ ಮಾನವ ಧರ್ಮವೇ ನೆಲೆನಿಂತರೆ ಎಲ್ಲಾ ಸಮಸ್ಯೆಗಳು ಬಗೆಹರಿಯಲು ಸಾಧ್ಯವಿದೆ. ಮನುಷ್ಯಕುಲ ಮಾತ್ರವೇ ಶ್ರೇಷ್ಠವಾಗಿದ್ದು ನಮ್ಮ ನಡೆ ನುಡಿ ಶುದ್ಧವಾಗಿರಬೇಕು ಹಾಗೂ ಯಾವುದೇ ಜಾತಿಯೂ ಮೇಲು ಕೀಳು ಅಲ್ಲ. ಕುವೆಂಪು ಅವರು ವಿಶ್ವ ಮಾನವ ಸಂದೇಶ ಸಾರಿದ್ದರು. ನಮ್ಮ ಸಮಸ್ಯೆಗಳಿಗೆ ವಚನಗಳಲ್ಲೇ ಪರಿಹಾರವಿದೆ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ. ಹೆಚ್. ಖಾದರ್ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜಯಂತಿಗಳ ಆಚರಣೆ ಮಾಡಿ ಆ ಮೂಲಕ ಯುವಪೀಳಿಗೆಗೆ ಶ್ರೇಷ್ಠ ವ್ಯಕ್ತಿಗಳ ಆದರ್ಶದ ಕುರಿತು ತಿಳಿಸಬೇಕು ಎಂದು ಹೇಳಿದರು.

ಸಾಹಿತಿ ಸದಾನಂದ ನಾರಾವಿ ಮಡಿವಾಳ ಮಾಚಿದೇವರ ವಚನಗಳ ಹಾಗೂ ಅವುಗಳ ಸಂದೇಶದ ಕುರಿತು ಉಪನ್ಯಾಸ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಆರ್. ರವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ. ವಿ. ನಾಯಕ್, ದ.ಕ. ಹಾಗೂ ಉಡುಪಿ ಜಿಲ್ಲೆಯ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಎರ್ಮಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ ಉಪಸ್ಥಿತರಿದ್ದರು.

* * 

ಮನುಷ್ಯಕುಲ ಮಾತ್ರವೇ ಶ್ರೇಷ್ಠವಾಗಿದ್ದು ನಮ್ಮ ನಡೆ ನುಡಿ ಶುದ್ಧವಾಗಿರಬೇಕು ಹಾಗೂ ಯಾವುದೇ ಜಾತಿಯೂ ಮೇಲು ಕೀಳು ಅಲ್ಲ.
ಡಾ. ನಾಗಪ್ಪಗೌಡ, ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.