ADVERTISEMENT

‌ಕೈಜೋಡಿಸಿದ ಕೆಎಂಸಿ ಸಿಬ್ಬಂದಿ,  ಅತ್ತಾವರ ಸುತ್ತಮುತ್ತ ಸ್ವಚ್ಛ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 6:29 IST
Last Updated 19 ಫೆಬ್ರುವರಿ 2018, 6:29 IST

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 16ನೇ ಶ್ರಮದಾನ ಭಾನುವಾರ ಅತ್ತಾವರದಲ್ಲಿ ಜರುಗಿತು. ಕೆಎಂಸಿ ಆಸ್ಪತ್ರೆಯ ಹಿರಿಯ ಮ್ಯಾನೇಜರ್‌ (ಆಪರೇಶನ್ಸ್‌) ಅನಿರುದ್ಧ ನಾಯಕ್ 16ನೇ ಶ್ರಮದಾನಕ್ಕೆ ಚಾಲನೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗಮಿಸಿದ ಸ್ವಯಂ ಸೇವಕರನ್ನು ಸ್ವಾಗತಿಸಿದರು. ಗ್ರೇಸಿ ಲೋಬೊ, ಇಮ್ತಿಯಾಜ್ ಅಹ್ಮದ್, ನಝೀರ್ ಅಹ್ಮದ್ ಉಪಸ್ಥಿತರಿದ್ದರು. ಹಲವರು ಅತ್ತಾವರ ಕಟ್ಟೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಿದ್ದಿದ್ದ ಕಸತ್ಯಾಜ್ಯವನ್ನು ಹೆಕ್ಕಿ ಕಸಗುಡಿಸಿ ಸ್ವಚ್ಛಗೊಳಿಸುತ್ತಿದ್ದರೆ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿ ಡಾ. ಸಿಂಧು ಸುರೇಂದ್ರ ಅವರೊಡನೆ ಅತ್ತಾವರ ಕಟ್ಟೆಯಿಂದ ಕೆಎಂಸಿ ಸಾಗುವ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಿದರು. ಎಸ್.ಎಂ. ಕುಶೆ ವಿದ್ಯಾರ್ಥಿಗಳು ಅಧ್ಯಾಪಕ ಪ್ರತಿಮ ಕುಮಾರ್ ಮಾರ್ಗದರ್ಶನದಲ್ಲಿ ಎಸ್. ಎಂ. ಕುಶೆ ಶಾಲೆಯತ್ತ ಸಾಗುವ ಮಾರ್ಗ ಹಾಗೂ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದರು.

ಅನಿಲ್ ಕುಮಾರ್ ಅತ್ತಾವರ ಹಾಗೂ ಸ್ಥಳೀಯ ನಾಗರಿಕರು ರೈಲ್ವೇ ನಿಲ್ದಾಣದತ್ತ ಸಾಗುವ ಮಾರ್ಗವನ್ನು ಹಾಗೂ ಅಕ್ಕಪಕ್ಕದ ಜಾಗೆಗಳಲ್ಲಿ ಸ್ವಚ್ಛತೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಸೌರಜ್ ಮಂಗಳೂರು ನೇತೃತ್ವದಲ್ಲಿ ಅನಧಿಕೃತ ಬ್ಯಾನರ್ ತೆರವುಗೊಳಿಸುವ ಕಾರ್ಯ ನಡೆಯಿತು. ಅಧ್ಯಾಪಕಿ ಪ್ರಜ್ಞಾಶ್ರೀ ಮತ್ತು ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ವೈದ್ಯನಾಥ ನಗರದ ಮನೆಮನೆಗಳಿಗೆ ತೆರಳಿ ಸ್ವಚ್ಛತೆಯ ಕರಪತ್ರಗಳನ್ನು ವಿತರಿಸಿದರು.

ADVERTISEMENT

ಅತ್ತಾವರ ಸೆಂಟರ್ ಎದುರಿನ ಕಾಲುದಾರಿಯಲ್ಲಿ ಕೆಲವು ಜನ ತ್ಯಾಜ್ಯವನ್ನು ಹಾಕುವ ಪರಿಣಾಮ ಜನರು ಫುಟ್‌ಪಾತ್‌ ಬಳಸಲಾಗುತ್ತಿರಲಿಲ್ಲ. ಅಶೋಕ ಸುಬ್ಬಯ್ಯ, ದೀಪಕ ಮೇಲಂಟ ಹಾಗೂ ಸ್ವಚ್ಛ ಮಂಗಳೂರು ಕಾರ್ಯಕರ್ತರು ಅಲ್ಲಿ ಹಲವು ದಿನಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆಗೆದು ಕಾಲುದಾರಿ ಕಣ್ಣಿಗೆ ಕಾಣುವಂತೆ ಮಾಡಿದರು. ಅಲ್ಲದೇ ಅದರ ಇನ್ನೊಂದು ಭಾಗದಲ್ಲಿ ಆಗಾಗ ಎತ್ತರ ಪ್ರದೇಶದ ಮಣ್ಣು ಜರಿದು ಯಾವಾಗಲೂ ಬೀಳುತ್ತಿತ್ತು, ಇದನ್ನು ತಡೆಯಲು ಕಲ್ಲಿನ ತಡೆಗೋಡೆಯನ್ನು ಕಟ್ಟಿದರು.

ಮಣ್ಣುಕಲ್ಲುಗಳನ್ನು ತೆಗೆದು ಪಾದಚಾರಿಗಳಿಗೆ ಹಾಗೂ ಬಸ್ ನಿಲ್ಲುವ ಜಾಗ ಅದಾದರಿಂದ ಬಸ್ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಯಿತು. ಅಲ್ಲದೇ ಆ ಸ್ಥಳವನ್ನು ಅಂದಗಾಣಿಸಲಿಕ್ಕಾಗಿ ಒಂದಿಷ್ಟು ಹೂಕುಂಡಗಳನ್ನಿಡಲಾಗಿದೆ.

ತ್ಯಾಜ್ಯ ಬೀಳುವುದು ನಿಲ್ಲುವವರೆಗೂ ಪ್ರತಿದಿನ ಅಲ್ಲಿನ ಜನರ ಮನೆಗಳಿಗೆ ತೆರಳಿ ಜಾಗೃತಿ ಮಾಡುವ ಅಭಿಯಾನ ಜಾರಿಯಲ್ಲಿರುತ್ತದೆ. ಇಂತಹ ಮಾದರಿಗಳನ್ನು ಹಲವೆಡೆ ಮಾಡಿ ಯಶಸ್ವಿಯಾದ ಹಿನ್ನಲೆಯಲ್ಲಿ ಈ ಕ್ರಮವನ್ನು ಅನುಸರಿಸಲಾಯಿತು. ಮುಂದಿನ ವಾರ ಅಲ್ಲಿ ಕುಳಿತುಕೊಳ್ಲಲು ಸರಳ ಬೆಂಚುಗಳನ್ನು ಅಳವಡಿಸಲು ಯೋಜಿಸಲಾಯಿತು.

ಲಕ್ಷ್ಮಣ ಕುಂದರ್, ಅಫ್ಜಲ್, ಸತೀಶ್ ಭಟ್, ಹಾಗೂ ಕೆಎಂಸಿ ಆಸ್ಪತ್ರೆಯ ಸುಮಾರು ಎಪ್ಪತ್ತು ಸಿಬ್ಬಂದಿ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

ಕಾರ್ಯಕರ್ತರಿಗೆ ಶ್ರೀ ಚಕ್ರಪಾಣಿ ದೇವಸ್ಥಾನದಲ್ಲಿ ಚಹಾತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಅಕ್ಷಿತ್ ಅತ್ತಾವರ ಅಭಿಯಾನವನ್ನು ಸಂಯೋಜಿಸಿದರು. ಪುತ್ತೂರು, ಮಂಜನಾಡಿ, ಕಾಯರ್ತಡ್ಕ, ಅತಿಕಾರಿಬೆಟ್ಟು ಸೋಮೇಶ್ವರ, ಮೇರ್ಲಪದವು, ಕಿನ್ಯಾ, ಉಳ್ಳಾಲ, ಮಲ್ಲೂರು, ಉಳಾಯಿಬೆಟ್ಟು, ಬಜ್ಪೆ, ಮೆನ್ನಬೆಟ್ಟು, ವಾಲ್ಪಾಡಿ ಸೇರಿದಂತೆ ಹಲವೆಡೆ ಸ್ವಚ್ಛ ಗ್ರಾಮ ಅಭಿಯಾನ ಜರುಗಿತು. ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ, ನವೀನ ಕೊಣಾಜೆ ಹಾಗೂ ಮಹೇಶ್ ಕೊಲ್ಯ ಸ್ವಚ್ಛ ಗ್ರಾಮ ಅಭಿಯಾನವನ್ನು ಸಂಯೋಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.