ADVERTISEMENT

6 ಗ್ರಾ.ಪಂ.ಗಳ ವಿರುದ್ಧ ಪ್ರಕರಣ ದಾಖಲು

ಕಾಂಪೋಸ್ಟ್ ಪೈಪ್ ಖರೀದಿ ಹಣ ದುರುಪಯೋಗ

​ಪ್ರಜಾವಾಣಿ ವಾರ್ತೆ
Published 26 ಮೇ 2018, 11:08 IST
Last Updated 26 ಮೇ 2018, 11:08 IST

ಮಂಗಳೂರು: ಕಾಂಪೋಸ್ಟ್ ಘಟಕಕ್ಕೆ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ 6 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸ್ವಚ್ಛತಾ ಆಂದೋಲನದ ಜಿಲ್ಲಾ ನೋಡಲ್ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಜಿಲ್ಲಾ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.

ಎಲ್ಲ ಪ್ರಕರಣಗಳಲ್ಲಿ ಜಿಲ್ಲಾ ಪಂಚಾಯಿತಿ ಸಂಪೂರ್ಣ ಸ್ವಚ್ಛತಾ ಆಂದೋಲನದ ನೋಡಲ್‌ ಅಧಿಕಾರಿ ರೋಹಿತ್‌ ಎ.ಆರ್‌. ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಪುತ್ತೂರು ತಾಲ್ಲೂಕು ಕೋಡಿಂಬಾಡಿ ಗ್ರಾಮ ಪಂಚಾಯಿತಿಯಲ್ಲಿ 2015-16ನೇ ಸಾಲಿನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ, ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾಮೋದರ ಗೌಡ ಅವರ ಮೇಲೆ ಪ್ರಕರಣ ದಾಖಲಾಗಿದೆ.

ADVERTISEMENT

ಸುಳ್ಯ ತಾಲ್ಲೂಕು ಜಾಲ್ಸೂರು ಗ್ರಾಮ ಪಂಚಾಯಿತಿಯಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಅಧ್ಯಕ್ಷೆ ಶಶಿಕಲಾ ಎಸ್. ನಾಯಕ್, ಪಿಡಿಒ ಶೀನ ಎ. ವಿರುದ್ಧ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲ್ಲೂಕು ಆರ್ಯಾಪು ಗ್ರಾಮ ಪಂಚಾಯಿತಿಯ ಪ್ರಕರಣದಲ್ಲಿ ಅಧ್ಯಕ್ಷೆ ಗೀತಾ, ಪಿಡಿಒ, ಬಿಳಿನೆಲೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಅಧ್ಯಕ್ಷೆ ಶಾರದಾ ಟಿ., ಸದ್ಯಕ್ಕೆ ಕನಕಮಜಲು ಪಿಡಿಒ ಆಗಿರುವ ಸರೋಜಾ, ಸದ್ಯಕ್ಕೆ ಮಂಡೆಕೋಲು ಪಂಚಾಯಿತಿಯಲ್ಲಿರುವ ಕಾರ್ಯದರ್ಶಿ ರಮೇಶ ಪಿ. ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು ತಾಲ್ಲೂಕು ಕೊಯಿಲ ಗ್ರಾಮ ಪಂಚಾಯಿತಿಯ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಧ್ಯಕ್ಷೆ ಮೀನಾಕ್ಷಿ ಬಿ., ಹಾಲಿ ಪಿಡಿಒ ಚಿತ್ರಾವತಿ ವಿರುದ್ಧ, ಪೆರಾಬೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಅಧ್ಯಕ್ಷೆ ಬೇಬಿ ಸಿ. ಪಾಟಾಳಿ, ಪಿಡಿಒ ಜಿ.ಡಿ. ಲಲಿತಾ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯದ ಪೊಲೀಸ್‌ ಅಧೀಕ್ಷಕಿ ಶ್ರುತಿ ಎನ್.ಎಸ್. ಮಾರ್ಗದರ್ಶನದಲ್ಲಿ, ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ಸುಧೀರ್ ಹೆಗಡೆ ಈ ಎಲ್ಲ ಆರು ಪ್ರಕರಣಗಳನ್ನು ದಾಖಲಿಸಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಕೊಟ್ಟಾರಿ ತನಿಖೆ ನಡೆಸಿದ್ದಾರೆ. ಈ ಹಿಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಈ ಪ್ರಕರಣಗಳ ವಿಚಾರಣೆ ನಡೆಸಿದ್ದರು ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.