ADVERTISEMENT

ಮಂಗಳೂರು: 67 ಪೊಲೀಸರು, 3 ಗೃಹರಕ್ಷಕರಿಗೆ ಕೋವಿಡ್

ಅಂತರ ಹಾಗೂ ಆನ್‌ಲೈನ್‌ ಸೂತ್ರಕ್ಕೆ ಮೊರೆ

ಹರ್ಷವರ್ಧನ ಪಿ.ಆರ್.
Published 16 ಜುಲೈ 2020, 17:36 IST
Last Updated 16 ಜುಲೈ 2020, 17:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ತನಕ 67 ಪೊಲೀಸರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಕರ್ತವ್ಯ ನಿರ್ವಹಣೆಯಲ್ಲೀಗ, ‘ಅಂತರ ಮತ್ತು ಆನ್‌ಲೈನ್’ಗೆ ಆದ್ಯತೆ ಹೆಚ್ಚಿದೆ.

ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,977 ಪೊಲೀಸರು ಇದ್ದಾರೆ. ಈ ಪೈಕಿ ಕಮಿಷನರೇಟ್‌ನ 57 ಹಾಗೂ ಜಿಲ್ಲಾ ವ್ಯಾಪ್ತಿಯ 10 ಪೊಲೀಸರಲ್ಲಿ ಸೋಂಕು ದೃಢಪಟ್ಟಿದೆ.

ಹೀಗಾಗಿ, ಸ್ಯಾನಿಟೈಸರ್, ಮಾಸ್ಕ್ ಮತ್ತಿತರ ಕೋವಿಡ್–19 ಮಾರ್ಗಸೂಚಿ ಜೊತೆಗೆ, ಕರ್ತವ್ಯ ನಿರ್ವಹಣೆಯಲ್ಲಿ ಅಂತರ ಕಾಯ್ದುಕೊಳ್ಳುವ ಹಾಗೂ ಆನ್‌ಲೈನ್ ಬಳಕೆಗೆ ಆದ್ಯತೆ ನೀಡುವ ಕ್ರಮಗಳನ್ನು ಅನುಸರಿಸುತ್ತಿದೆ.

ADVERTISEMENT

‘ಸಿಬ್ಬಂದಿಯನ್ನು ಹೊರಾಂಗಣ ಮತ್ತು ಒಳಾಂಗಣ ಎಂದು ಪ್ರತ್ಯೇಕವಾಗಿ ವಿಂಗಡಿಸಿದ್ದು, ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ತಪಾಸಣೆ ನಡೆಸದೇ ಯಾರನ್ನೂ ಠಾಣೆಗಳಿಗೆ ಬಿಡಲಾಗುತ್ತಿಲ್ಲ. ಪ್ರತಿ ಸಿಬ್ಬಂದಿಗೆ ಕಡ್ಡಾಯ ವಾರದ ರಜೆ, ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆ ಹೊಂದಿದವರು ಹಾಗೂ 50 ವರ್ಷ ಮೇಲ್ಪಟ್ಟವರಿಗೆ ರಜೆ ನೀಡಲಾಗುತ್ತಿದೆ. ಕರ್ತವ್ಯದಲ್ಲಿನ ಅಂತರ ಹೆಚ್ಚಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದರು.

‘ಹೊರಾಂಗಣದಲ್ಲಿರುವ ಸಿಬ್ಬಂದಿಗೆ ಫೋನ್‌ ಮೂಲಕವೇ ಕರ್ತವ್ಯ ನಿಯೋಜಿಸಲಾಗುತ್ತದೆ. ಅವರು ಠಾಣೆಗೆ ಬರುವಂತಿಲ್ಲ. ಅಲ್ಲದೇ, ಆದಷ್ಟು ಚಟುವಟಿಕೆಗಳನ್ನು ಆನ್‌ಲೈನ್ (ಮೊಬೈಲ್) ಮೂಲಕವೇ ನಿರ್ವಹಿಸಲಾಗುತ್ತಿದೆ’ ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ತಿಳಿಸಿದರು.

‘ಸಂಚಾರ ತಪಾಸಣೆ, ಚೆಕ್‌ಪೋಸ್ಟ್ ನಿರ್ವಹಣೆ ಮತ್ತಿತರ ಸಂದರ್ಭಗಳಲ್ಲಿ ನೇರವಾಗಿ ಕೈಯಿಂದ ದಾಖಲೆಗಳನ್ನು ಪರಿಶೀಲಿಸದೇ, ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಳ್ಳಲಾಗುತ್ತದೆ. ಅದನ್ನು ಪರಿಶೀಲಿಸಿದ ಬಳಿಕ ನಿಯಮ ಉಲ್ಲಂಘಿಸಿದವರ ಮೊಬೈಲ್‌ಗೆ ನೋಟಿಸ್ ರವಾನಿಸಲಾಗುತ್ತದೆ’ ಎಂದು ಎಸಿಪಿ ವಿನಯ್ ಗಾಂವ್ಕರ್ ವಿವರಿಸಿದರು.

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್, ಕ್ವಾರಂಟೈನ್ ಸೇರಿದಂತೆ ವಿವಿಧ ಕರ್ತವ್ಯಗಳ ಪೈಕಿ ಪೊಲೀಸರು ಮುಂಚೂಣಿಯ ವಾರಿಯರ್ಸ್‌ಗಳಾಗಿದ್ದಾರೆ. ಅವರಿಗೆ ಸೋಂಕು ತಗುಲಿದ್ದು, ಕಾನೂನು ಪಾಲನೆಗೆ ಆರೋಗ್ಯ ಸಮಸ್ಯೆ ಕಾಡಿದೆ.

ಮೂವರು ಗೃಹರಕ್ಷಕ ಸಿಬ್ಬಂದಿಗೂ ಕೋವಿಡ್

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 930 ಗೃಹರಕ್ಷಕ ಸಿಬ್ಬಂದಿ ಇದ್ದು, ಈ ಪೈಕಿ ಮೂವರಿಗೆ ಕೋವಿಡ್–19 ಸೋಂಕು ತಗುಲಿತ್ತು. ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 12 ಮಂದಿ ಈ ತನಕ ಕ್ವಾರಂಟೈನ್‌ಗೆ ಒಳಪಟ್ಟಿದ್ದರು’ ಎಂದು ಗೃಹ ರಕ್ಷಕ ದಳದ ಮಹಾದೇಷ್ಟ ಡಾ.ಮುರಲೀ ಮನೋಹರ ಚೂಂತಾರು ತಿಳಿಸಿದರು.

ಘಟಕ; ಒಟ್ಟು ಸಂಖ್ಯೆ; ಕ್ವಾರಂಟೈನ್; ಕೊರೊನಾ ಸೋಂಕಿತರು

ಕಮಿಷನರೇಟ್; 1,072; 156; 57

ದ.ಕ.ಜಿಲ್ಲಾ; 905; 66; 10

ಗೃಹರಕ್ಷಕ ದಳ; 930; 17; 03

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.