ADVERTISEMENT

7ರಂದು ಮಡೆಸ್ನಾನ ವಿರೋಧಿಸಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:21 IST
Last Updated 5 ಡಿಸೆಂಬರ್ 2013, 8:21 IST

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಮತ್ತು ಇತರ ದೇವ­ಸ್ಥಾನಗಳಲ್ಲಿ ನಡೆಯುತ್ತಿರುವ ಮಡೆ ಮಡೆಸ್ನಾನ ಆಚರಣೆ­ಯನ್ನು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ  ತಡೆ ಹಿಡಿಯು­ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಎದುರು ಇದೇ 7ರಂದು ಉಪವಾಸ ಸತ್ಯಾಗ್ರಹ ನಡೆಸಲಿದೆ.

ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ನಿಷೇಧಿಸುವ ಮೂಲಕ ಹರಕೆಯ ರೂಪದಲ್ಲಿ ಎಂಜಲೆಲೆಯ ಮೇಲೆ ಉರುಳುವ ಈ ಅಮಾನವೀಯ ಆಚರಣೆಯನ್ನು ನಿಲ್ಲಿಸಬೇಕು ಎಂದು ರಾಜ್ಯ ಹಿಂದು­ಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಎಸ್. ಶಿವರಾಮು ಬುಧವಾರ ಸುದ್ದಿ­ಗೋಷ್ಠಿಯಲ್ಲಿ ತಿಳಿಸಿದರು.

ಹಿಂದಿನ ಸರ್ಕಾರದ ಸಚಿವ ಸಂಪುಟದ ಬಹುತೇಕರು ಮಡೆ ಮಡೆಸ್ನಾನದ ಪರವಾಗಿ ಮಾತನಾಡಿದಾಗ ಪ್ರತಿಪಕ್ಷವಾದ ಕಾಂಗ್ರೆಸ್‌ ಪಕ್ಷವು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಮಡೆ ಮಡೆ ಸ್ನಾನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಆಗ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ನಾಯಕಿಯಾಗಿದ್ದ ಮೋಟಮ್ಮ ಮಡೆ ಮಡೆ ಸ್ನಾನ ವಿಚಾರವನ್ನು ಬಳಸಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ. ಅಲ್ಲದೆ ಮಡೆ ಮಡೆ ಸ್ನಾನವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದ ಸಿದ್ದರಾಮಯ್ಯ­ನವರೇ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ ಮಾನವ ಘನತೆಗೆ ಕುಂದುಂಟು ಮಾಡುವಂತೆ ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳುವ ಈ ಆಚರಣೆಯನ್ನು ಹಾಗೂ ಅದಕ್ಕೆ ಪೂರಕವಾಗಿರುವ ಪಂಕ್ತಿಭೇದವನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.

ಸತ್ಯಾಗ್ರಹದಲ್ಲಿ ಪ್ರಗತಿಪರ ಮಠಾಧಿಪತಿಗಳಾದ ಉರಿಲಿಂಗ ಪೆದ್ದಿ ಮಹಾಸಂಸ್ಥಾನ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ರೇವಣ­ಸಿದ್ದೇಶ್ವರ ಮಹಾಮಠದ ಬಸವರಾಜ ದೇವರು, ಮುಡುಪುತೊರೆ ಮಠದ  ಸಿದ್ದರಾಮಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ನಾಯಕರಹಟ್ಟಿ ತಿಪ್ಪೇರುದ್ರ ಸ್ವಾಮೀಜಿ, ಮಂಡ್ಯದ ಬೆಳಕವಾಡಿ ಮಠದ  ಮಲ್ಲಪ್ಪ ಸ್ವಾಮೀಜಿ, ಅಳಗಂಚಿ ಗುರುಲಿಂಗ ಜಂಗಮ ಮಠದ ಬಸವರಾಜ ದೇವರು, ಬೆಟ್ಟದ ಪುರ ಮಠದ ರಾಚೋಟಿ ಶಿವಚಾರ್ಯ ಸ್ವಾಮೀಜಿ ಭಾಗವಹಿಸಿ ಮಡೆ ಮಡೆಸ್ನಾನ ಮತ್ತು ಪಂಕ್ತಿ ಭೇದವನ್ನು ನಿಲ್ಲಿಸಲು ಒತ್ತಾಯಿಸಲಿದ್ದಾರೆ. ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ, ಡಿವೈಎಫ್‌ಐ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಶ್ವಕರ್ಮ ಮಹಾಮಂಡಲದ ಮೈಸೂರು ಜಿಲ್ಲಾಧ್ಯಕ್ಷ ಸಿ ಟಿ ಆಚಾರ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.