ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪೆರ್ನೆ ಸಮೀಪದ ಬಿಳಿಯೂರು ಗ್ರಾಮದ ಬಾಣಬೆಟ್ಟು ಎಂಬಲ್ಲಿ ಸೋಮ ವಾರ ಬೆಳಿಗ್ಗೆ ಬುಲೆಟ್ ಟ್ಯಾಂಕರ್ ಪಲ್ಟಿ ಆಗಿ ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದಿದ್ದು, ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ತರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್ ಬಿಳಿಯೂರು ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಉರುಳಿ ಬಿದ್ದಿದೆ. ಚಾಲಕ
ತಮಿಳುನಾಡು ಕರೂರು ನಿವಾಸಿ ಲೋಹನಾಥನ್ ಮತ್ತು ಕ್ಲೀನರ್ ಬಜ್ಜಿ ಬಾಲಕೃಷ್ಣನ್ ಸಣ್ಣಪುಟ್ಟ ಗಾಯಗೊಂಡಿ ದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.
ಟ್ಯಾಂಕರ್ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಹೆದ್ದಾರಿಯನ್ನು ಸಂಪೂರ್ಣವಾಗಿ ಆವರಿ ಸಿಕೊಂಡಿತ್ತು. ಬೆಳಿಗ್ಗೆ 9.30ಕ್ಕೆ ಟ್ಯಾಂಕರ್ ಪಲ್ಟಿ ಆಗಿದ್ದು, ಬಳಿಕ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಉಂಟಾಯಿತು. ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವಾಹನ ಹೋಗುವುದಕ್ಕೆ ಮಾತ್ರ ಜಾಗ ಇದ್ದು, ಬಳಿಕ ಕೆಸರು ತುಂಬಿದ ಕಾರಣ ಲಘು ವಾಹನಗಳ ಸಂಚಾರವನ್ನೂ ತಡೆ ಹಿಡಿಯಲಾಯಿತು.
7 ತಾಸು ಹೆದ್ದಾರಿ ತಡೆ: ಸ್ಥಳಕ್ಕೆ ಅಗ್ನಿ ಶಾಮಕ ದಳವನ್ನು ಕರೆಸಿ ಮುಂಜಾಗ್ರತಾ ಕ್ರಮ ಅನುಸರಿಸಲಾಯಿತು. ಕ್ರೇನ್ ಮೂಲಕ ರಸ್ತೆಯಲ್ಲಿ ಬಿದ್ದಿದ್ದ ಟ್ಯಾಂಕರ್ ಅನ್ನು ಸಂಜೆ 5 ಗಂಟೆಯ ಹೊತ್ತಿಗೆ ಬದಿಗೆ ಸರಿಸಿ ಇಡಲಾಯಿತು. ಈ ಮಧ್ಯೆ ಸುಮಾರು 7 ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು.
ಮಂಗಳೂರು- ಬೆಂಗಳೂರು ಮಧ್ಯೆ ಸಂಚರಿಸುವ ವಾಹನಗಳನ್ನು ಉಪ್ಪಿನಂಗಡಿ-ಪುತ್ತೂರು-ಮಾಣಿ ಬದಲಿ ರಸ್ತೆ ಮೂಲಕ ಸಂಚಾರಕ್ಕೆ ಸೂಚಿಸ ಲಾಗಿತ್ತು. ಆದರೆ ಬುಲೆಟ್ ಟ್ಯಾಂಕರ್, ಕಂಟೈನರ್, ಲಾರಿ ಮೊದಲಾದ ಘನ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 2 ಕಿ.ಮಿ. ದೂರದ ತನಕ ಸರದಿ ಸಾಲಿನಲ್ಲಿ ನಿಂತಿದ್ದವು.
ನಿಟ್ಟುಸಿರು ಬಿಟ್ಟ ಗ್ರಾಮಸ್ಥರು: ಟ್ಯಾಂಕರ್ ಗ್ಯಾಸ್ ಹೇರಿಕೊಂಡು ಹೋಗುವಂತದ್ದು ಆಗಿದ್ದು, ಟ್ಯಾಂಕರ್ ಪಲ್ಟಿ ಆಗಿ ಬೀಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಆತಂಕಗೊಂಡರು. ಆದರೆ ಟ್ಯಾಂಕರ್ ನಲ್ಲಿ ಯಾವುದೇ ಸೋರಿಕೆ ಇಲ್ಲದ ಕಾರಣ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು. ಪುತ್ತೂರು ಸಂಚಾರಿ ಪೊಲೀಸ್ ಎ.ಎಸ್.ಐ. ವೆಂಕಟೇಶ್ ಭಟ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಎ.ಎಸ್.ಐ. ಚೆನ್ನಪ್ಪ ಗೌಡ ಮತ್ತು ಸಿಬ್ಬಂದಿ ಸ್ಥಳದಲ್ಲಿ ಇದ್ದು, ಅಗತ್ಯ ಕ್ರಮ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.