ADVERTISEMENT

ದಕ್ಷಿಣ ಕನ್ನಡ | ಕೋವಿಡ್‌: ಒಂದೇ ದಿನ 8 ಸಾವು

1,848ಕ್ಕೆ ಏರಿದ ಸೋಂಕಿತರ ಸಂಖ್ಯೆ: ಜಿಲ್ಲೆಯಲ್ಲಿ ಮೃತರ ಸಂಖ್ಯೆ 38

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 8:07 IST
Last Updated 11 ಜುಲೈ 2020, 8:07 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಆತಂಕ ತೀವ್ರವಾಗುತ್ತಿದ್ದು, ಒಂದೇ ದಿನ 8 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್–19ನಿಂದ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿದೆ.

ಇದೇ 8 ರಂದು 68 ವರ್ಷದ ಪುರುಷ, ಇದೇ 9 ರಂದು 35, 67, 57, 55ವರ್ಷದ ಪುರುಷರು ಹಾಗೂ ಶುಕ್ರವಾರ 48 ಹಾಗೂ 65 ವರ್ಷದ ಪುರುಷರು, 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸಾವಿನ ಕಾರಣವನ್ನು ನಿರ್ಧರಿಸಲು ಜಿಲ್ಲಾ ತಜ್ಞರ ಸಮಿತಿಯಿಂದ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಇದೇ 8 ರಂದು ಮೃತಪಟ್ಟ 68 ವರ್ಷದ ವೃದ್ಧ ಮಧುಮೇಹ ಯಕೃತ್ ಕಾಯಿಲೆ, ಸಿರೋಸಿಸ್‌ನಿಂದ, ಇದೇ 9 ರಂದು ಮೃತಪಟ್ಟ 35 ವರ್ಷದ ಯುವಕ ಸ್ಥೂಲಕಾಯದಿಂದ, 67 ವರ್ಷದ ವೃದ್ಧ ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ, 57 ವರ್ಷದ ಪುರುಷ ಮಧುಮೇಹ, ಅಧಿಕ ರಕ್ತದೊತ್ತಡದಿಂದ, 55 ವರ್ಷದ ಪುರುಷ ಸೆಪ್ಟಿಸೆಮಿಯಾ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ADVERTISEMENT

ಶುಕ್ರವಾರ ಮೃತಪಟ್ಟ 65 ವರ್ಷದ ವೃದ್ಧ ಮಧುಮೇಹ ಹಾಗೂ ರಕ್ತದೊತ್ತಡದಿಂದ, 48 ವರ್ಷದ ಪುರುಷ ಮಧುಮೇಹ, ಕಿಡ್ನಿ ವೈಫಲ್ಯ, ಹೃದಯಸಂಬಂಧಿ ಕಾಯಿಲೆ, ತೀವ್ರ ಪ್ರತಿರೋಧಕ ಶ್ವಾಸಕೋಶ ಸಮಸ್ಯೆಯಿಂದ ಹಾಗೂ 58 ವರ್ಷದ ಮಹಿಳೆ ಮಧುಮೇಹದಿಂದ ಬಳಲುತ್ತಿದ್ದರು.

ಈ ಎಲ್ಲರ ಗಂಟಲು ದ್ರವದ ಮಾದರಿಯನ್ನು ಆಯಾ ದಿನದಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ವರದಿ ಬಂದಿದ್ದು, ಇವರಿಗೆ ಕೋವಿಡ್–19 ಇರುವುದು ದೃಢವಾಗಿದೆ. ಮೃತಪಟ್ಟವರಲ್ಲಿ ನಗರದಲ್ಲಿ ಕೈಗಾರಿಕಾ ಸಂಸ್ಥೆಯೊಂದರಲ್ಲಿ ಭದ್ರತೆ ನಿಯೋಜಿತರಾಗಿದ್ದ ಕೇಂದ್ರ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್‌ಎಫ್‌) ಎಎಸ್‌ಐ ಒಬ್ಬರು ಸೇರಿದ್ದಾರೆ.

139 ಹೊಸ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 139 ಜನರಿಗೆ ಕೋವಿಡ್–19 ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,848ಕ್ಕೆ ಏರಿಕೆಯಾಗಿದೆ.

ಶುಕ್ರವಾರ ದೃಢವಾಗಿರುವ ಪ್ರಕರಣಗಳ ಪೈಕಿ ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 9 ಮಕ್ಕಳು ಹಾಗೂ 19 ಮಂದಿ ವೃದ್ಧರಿಗೆ ಸೋಂಕು ದೃಢವಾಗಿದೆ. 1, 3, 13, 16, 17 ವರ್ಷದ ತಲಾ ಒಬ್ಬರು, ಏಳು ವರ್ಷದ ಇಬ್ಬರು ಬಾಲಕರು, 12 ವರ್ಷದ ಇಬ್ಬರು ಬಾಲಕರು, 1, 2, 8, 9, 10, 15 ವರ್ಷದ ಬಾಲಕಿಯರು ಹಾಗೂ ಏಳು ವರ್ಷದ ಇಬ್ಬರು ಬಾಲಕಿಯರಿಗೆ ಸೋಂಕು ತಗಲಿದೆ.

ಇನ್ನು 60 ವರ್ಷದ ಮೂವರು, 64 ವರ್ಷದ ಇಬ್ಬರು, 65 ವರ್ಷದ ಮೂವರು ವೃದ್ಧರು, 62 ವರ್ಷದ ಇಬ್ಬರು, 61 ವರ್ಷದ ಇಬ್ಬರು, 74 ವರ್ಷದ ಇಬ್ಬರು, 63, 66, 69, 71 ಹಾಗೂ 78 ವರ್ಷದ ವೃದ್ಧರಿಗೆ ಕೋವಿಡ್–19 ಇರುವುದು ದೃಢವಾಗಿದೆ.

ಕಾಸರಗೋಡು: 11 ಮಂದಿಗೆ ಕೋವಿಡ್‌

ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ 17 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಈ ಪೈಕಿ 11 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.

ತಲಾ ಮೂವರು ವಿದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ. ಚೆಂಗಳದ 5, ಕಾಸರಗೋಡಿನ 4, ಮಧೂರಿನ 3, ಮುಳಿಯಾರು, ಕುಂಬ್ಡಾಜೆ, ದೇಲಂಪಾಡಿ, ಮೊಗ್ರಾಲ್ ಪುತ್ತೂರು, ಕುಂಬಳೆ, ತ್ರಿಕ್ಕರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 567 ಮಂದಿಗೆ ಸೋಂಕು ದೃಢಪಟ್ಟಿದ್ದು, 427 ಮಂದಿ ಗುಣಮುಖರಾಗಿದ್ದಾರೆ. 140 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.