ADVERTISEMENT

9,10ನೇ ತರಗತಿ ಅಲ್ಪಸಂಖ್ಯಾತ ಮಕ್ಕಳಿಗಿಲ್ಲ ವಿದ್ಯಾರ್ಥಿವೇತನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 17:29 IST
Last Updated 30 ಜೂನ್ 2025, 17:29 IST
ವಿದ್ಯಾರ್ಥಿವೇತನ
ವಿದ್ಯಾರ್ಥಿವೇತನ   

ಮಂಗಳೂರು: ಒಂಬತ್ತನೇ ತರಗತಿ ಮತ್ತು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ವರ್ಷವೂ ವಿದ್ಯಾರ್ಥಿವೇತನ ಸಿಗುವ ಭರವಸೆ ಕ್ಷೀಣವಾಗಿದೆ.

ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2025–26ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನೀಡಲು 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಂದ ಹಾಗೂ ಪಿಯುಸಿಯಿಂದ ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ ಓದುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎರಡು ಪ್ರತ್ಯೇಕ ವಿಭಾಗಗಳಲ್ಲಿ ಅರ್ಜಿ ಆಹ್ವಾನಿಸಿದ್ದು, 9,10ನೇ ತರಗತಿ ವಿದ್ಯಾರ್ಥಿಗಳು ಈ ಎರಡೂ ಅವಕಾಶಗಳಿಂದ ವಂಚಿತರಾಗಿದ್ದಾರೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ (ಎನ್‌ಎಸ್‌ಪಿ) ಮೂಲಕ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯಕ್ಕೆ ಸೇರಿದ 1ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿತ್ತು. ಅಂಕ ಗಳಿಕೆ ಆಧಾರದಲ್ಲಿ ಇದನ್ನು ನೀಡಲಾಗುತ್ತಿತ್ತು. ಕೇಂದ್ರದ ವಿದ್ಯಾರ್ಥಿವೇತನ ವಂಚಿತರಾದವರಿಗೆ ರಾಜ್ಯ ಸರ್ಕಾರದ ಎಸ್‌ಎಸ್‌ಪಿ ಯೋಜನೆಯಡಿ ಈ ಸೌಲಭ್ಯ ಸಿಗುತ್ತಿತ್ತು.

ADVERTISEMENT

ಆರ್‌ಟಿಇ ಕಾಯ್ದೆ ಅಡಿಯಲ್ಲಿ ಪ್ರತಿ ಮಗುವಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ದೊರೆಯುತ್ತಿರುವ ಕಾರಣ ನೀಡಿ ಕೇಂದ್ರ ಸರ್ಕಾರವು 2022ರಿಂದ ಈ ವಿದ್ಯಾರ್ಥಿವೇತನ ನೀಡುವುದನ್ನು ನಿಲ್ಲಿಸಿದೆ. ರಾಜ್ಯ ಸರ್ಕಾರ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ ವಿದ್ಯಾರ್ಥಿವೇತನ ನೀಡುತ್ತಿದೆ. ಜೊತೆಗೆ ಪಿಯುದಿಂದ ಪಿಜಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆಯಡಿ ₹3,000ದಿಂದ ₹50 ಸಾವಿರದವರೆಗೆ ವಿನಾಯಿತಿ ಸಿಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳ ಪಾಲಕರು.

9,10ನೇ ತರಗತಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ವಂಚಿತರಾಗಿರುವ ಬಗ್ಗೆ ಪಾಲಕರು ಇಲಾಖೆಗೆ ಬಂದು ಹೇಳಿಕೊಂಡಿದ್ದು, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.