ADVERTISEMENT

ಪಾರ್ವತಿ ಐತಾಳ್‌ಗೆ ಅಬ್ಬಕ್ಕ ಪ್ರಶಸ್ತಿ, ಭವಾನಿಗೆ ಅಬ್ಬಕ್ಕ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 9:34 IST
Last Updated 20 ಜನವರಿ 2023, 9:34 IST
ಪಾರ್ವತಿ ಜಿ.ಐತಾಳ್‌
ಪಾರ್ವತಿ ಜಿ.ಐತಾಳ್‌   

ಮಂಗಳೂರು: ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನೀಡುವ ‘ವೀರ ರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಪಾರ್ವತಿ ಜಿ. ಐತಾಳ್ ಹಾಗೂ ‘ವೀರರಾಣಿ ಅಬ್ಬಕ್ಕ ಪುರಸ್ಕಾರ’ಕ್ಕೆ ಪಾಡ್ದನದ ಮೇರು ಪ್ರತಿಭೆ ಭವಾನಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಜಯರಾಮ್ ಶೆಟ್ಟಿ, 'ಪ್ರೊ.ಅಮೃತ ಸೋಮೇಶ್ವರ ಅಧ್ಯಕ್ಷತೆಯ ಸಮಿತಿ ಇಬ್ಬರು ಸಾಧಕಿಯರನ್ನು ಆಯ್ಕೆ ಮಾಡಿದೆ. ಪಾರ್ವತಿ ಅವರು ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕಥೆ, ಕಾದಂಬರಿ, ವ್ಯಕ್ತಿಚಿತ್ರ, ವೈಚಾರಿಕ ಲೇಖನ, ನಾಟಕ, ಪುಸ್ತಕ ವಿಮರ್ಶೆ, ರಂಗ ವಿಮರ್ಶೆ ಸೇರಿದಂತೆ 25 ಕೃತಿಗಳನ್ನು ರಚಿಸಿದ್ದಾರೆ. 41 ಕೃತಿಗಳನ್ನು ಮಲೆಯಾಳ, ತುಳು, ಹಿಂದಿ, ಇಂಗ್ಲಿಷ್‌ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ, ನಾಲ್ಕು ಕೃತಿಗಳ ಸಂಪಾದಕರಾಗಿದ್ದಾರೆ. 10 ಕೃತಿಗಳ ಪ್ರಕಟಣೆಗೆ ಸಿದ್ಧತೆ ನಡೆಸಿದ್ದಾರೆ. ಶಿವರಾಮ ಕಾರಂತ ಮತ್ತು ತಕಳಿ ಶಿವ ಶಂಕರ ಪಿಳ್ಳೆ ಅವರ ಕಾದಂಬರಿಗಳ ತೌಲನಿಕ ಅಧ್ಯಯನಕ್ಕಾಗಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ’ ಎಂದರು.

'ದೈವ ನರ್ತಕ ದಿ.ಗುರುವಪ್ಪ ಪಂಬದ ಅವರ ಪತ್ನಿ ಭವಾನಿ ಅವರು ಪಾಡ್ದನದ ಮೇರು ಪ್ರತಿಭೆ. ದೈವಾರಾಧನೆಯಲ್ಲಿ ತೊಡಗಿಸಿಕೊಂಡಿರುವ ಅವರ ಪಾಡ್ದನ ಸಾಹಿತ್ಯವನ್ನು ಪಸರಿಸಿದ್ದಾರೆ. ಸೂಲಗಿತ್ತಿಯಾಗಿ 250ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್‌, ‘ಉಳ್ಳಾಲದ ಮಹಾತ್ಮಗಾಂಧಿ ರಂಗಮಂದಿರದಲ್ಲಿ ಫೆ.4ರಂದು ನಡೆಯಲಿರುವ 2022–23ನೇ ಸಾಲಿನ ಅಬ್ಬಕ್ಕ ಉತ್ಸವದ ಸಮಾರೋಪದಲ್ಲಿ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಉಪಾಧ್ಯಕ್ಷೆ ದೇವಕಿ ಉಳ್ಳಾಲ್, ಖಜಾಂಚಿ ಆನಂದ ಕೆ. ಅಸೈಗೋಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.