ADVERTISEMENT

ಲಾರಿ–ಸ್ಕೂಟರ್ ಡಿಕ್ಕಿ: ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 12:56 IST
Last Updated 25 ಏಪ್ರಿಲ್ 2022, 12:56 IST
   

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ಜೆಪ್ಪಿನಮೊಗರು ಸಮೀಪ ಭಾನುವಾರ ರಾತ್ರಿ ಲಾರಿ ಮತ್ತು ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.

ಕೊಣಾಜೆ ನಿವಾಸಿ ರೊನಾಲ್ಡ್(59) ಮೃತಪಟ್ಟವರು. ವೇಗವಾಗಿ ಬಂದ ಲಾರಿ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಲಾರಿಯಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವೇಳೆ ದಾರಿಯಲ್ಲಿ ಹೋಗುತ್ತಿದ್ದ ವಿಧಾನಸಭೆ ವಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಅವರು ವಾಹನ ನಿಲ್ಲಿಸಿ, ಲಾರಿ ಅಡಿಯಿಂದ ಹೊರತೆಗೆದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಲು ಮುಂದಾದರು. ಆದರೆ, ಅಷ್ಟರಲ್ಲಾಗಲೇ ರೊನಾಲ್ಡ್ ಮೃತಪಟ್ಟಿದ್ದರು. ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಈ ಘಟನೆಗೆ ಸಂಬಂಧಿಸಿ ಕೇವಲ ಲಾರಿ ಚಾಲಕನ ವಿರುದ್ಧ ಮಾತ್ರವಲ್ಲ, ಲಾರಿ ಮಾಲೀಕ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ADVERTISEMENT

ಚಾಲಕ ಪಾನಮತ್ತನಾಗಿ ಲಾರಿ ಚಲಾಯಿಸಿ, ಜೀವ ಬಲಿ ತೆಗೆದುಕೊಂಡಿದ್ದರೆ, ಅಂತಹವರನ್ನು ಚಾಲಕರನ್ನಾಗಿ ನೇಮಿಸಿಕೊಂಡಿರುವ ಮಾಲೀಕರ ವಿರುದ್ಧ ಕೂಡ ಪ್ರಕರಣ ದಾಖಲಿಸಬೇಕು. ಪಂಪ್‍ವೆಲ್‍ನಿಂದ ತಲಪಾಡಿವರೆಗೆ ಹೆದ್ದಾರಿಗಳ ಪ್ರಮುಖ ತಿರುವುಗಳಲ್ಲಿ ರಾತ್ರಿ ವೇಳೆ ರಿಫ್ಲೆಕ್ಟರ್‌ಗಳು ಇಲ್ಲ. ಹೀಗಾಗಿ, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕೂಡ ಪ್ರಕರಣ ದಾಖಲಿಸಬೇಕು. ಅಪಘಾತ ಸಂಭವಿಸಿ, 40 ನಿಮಿಷಗಳ ನಂತರ ಆಂಬುಲೆನ್ಸ್ ಸ್ಥಳಕ್ಕೆ ಬಂದಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.