ಮಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಅಮಾಯಕರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ತುಮಕೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
‘ತುಮಕೂರು ಜಿಲ್ಲೆಯ ಕೋತಿತೋಪು, ಚಾಮುಂಡೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಅರುಣ್ ಟಿ (27) ಬಂಧಿತ ಆರೋಪಿ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ಆರೋಪಿಯು ಫೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್, ಟ್ರೋಲ್ ಮಾಸ್ಟರ್, ಟ್ರೋಲ್ ಬಸ್ಯಾ ಇತ್ಯಾದಿ ಪೇಜ್‌ಗಳಲ್ಲಿ ಕಮೆಂಟ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡುತ್ತಿದ್ದ. ತನ್ನನ್ನು ಬೆಂಗಳೂರು ಪೊಲೀಸ್‌ನ ಸೈಬರ್ ಕ್ರೈಂ ಅಧಿಕಾರಿ ಸುಶೀಲ್ ಕುಮಾರ ಎಂದು ಪರಿಚಯಿಸಿಕೊಳ್ಳುತ್ತಿದ್ದ. ‘ನಿಮ್ಮ ಮೇಲೆ ದೂರು ಬಂದಿದೆ. ನಿಮ್ಮನ್ನು ಬಂಧಿಸುತ್ತೇನೆ’ ಎಂದು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ. ಆರೋಪಿ ವಿರುದ್ಧ ಸೈಬರ್ ಪೊರ್ಟಲ್‌ನಲ್ಲಿ ಇದುವರೆಗೆ ಒಟ್ಟು 11 ದೂರುಗಳು ದಾಖಲಾಗಿವೆ’ ಎಂದು ಅವರು ಮಾಹಿತಿ ನೀಡಿದರು.
‘ಇದೇ ಆರೋಪಿಯಿಂದ ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಇಲ್ಲಿನ ಸೆನ್ ಅಪರಾಧ ಠಾಣೆಗೆ ಮಂಗಳವಾರ ದೂರು ನೀಡಿದ್ದರು. ಆರಓಪಿಯು ಸಂತ್ರಸ್ತ ವ್ಯಕ್ತಿಗೆ ಹೆದರಿಸಿ ತನ್ನ ಖಾತೆಗೆ ₹ 1.23 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆರೋಪಿಯನ್ನು ತುಮಕೂರಿನಲ್ಲಿ ಬಂಧಿಸಿ ಬುಧವಾರ ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದು’ ಎಂದು ಕಮಿಷನರ್ ಮಾಹಿತಿ ನೀಡಿದರು.
ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿ ಆರೋಪಿತನನ್ನು ತುಮಕೂರಿನಲ್ಲಿ ಬಂಧಿಸಿ ಈ ದಿನ ಮಾನ್ಯ ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.