ಮಂಗಳೂರು: ಸಹೋದರನನ್ನು ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಿದೆ.
ಬಂಟ್ವಾಳ ತಾಲ್ಲೂಕು ಕನ್ಯಾನ ಗ್ರಾಮದ ನಂದರಬೆಟ್ಟುವಿನ ಐತಪ್ಪ ನಾಯ್ಕ ಯಾನೆ ಪುಟ್ಟು ನಾಯ್ಕ (45) ಶಿಕ್ಷೆಗೆ ಒಳಗಾದ ಅಪರಾಧಿ. ದಂಡ ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ. ದಂಡದ ಹಣದಲ್ಲಿ ₹10 ಸಾವಿರ ಮೊತ್ತವನ್ನು ಸರ್ಕಾರಕ್ಕೆ, ಉಳಿದ ಮೊತ್ತವನ್ನು ಕೊಲೆಯಾದ ವ್ಯಕ್ತಿಯ ತಾಯಿಗೆ ನೀಡುವಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುನೀತಾ ಎಸ್.ಜಿ. ಆದೇಶಿಸಿದ್ದಾರೆ.
ಪ್ರಕರಣದ ವಿವರ: 2022ರ ಮೇ 10ರಂದು ನಂದರಬೆಟ್ಟುವಿನ ಚಿಕ್ಕಪ್ಪನ ಮನೆಗೆ ಹೋಗಿದ್ದ ಬಾಳಪ್ಪ ಯಾನೆ ರಾಮಾ ನಾಯ್ಕ ಎಂಬುವವರು, ಪಕ್ಕದಲ್ಲೇ ಇದ್ದ ತಮ್ಮ ಕುಟುಂಬದ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಣ್ಣ ಐತಪ್ಪ ನಾಯ್ಕ ಜೊತೆ ಜಮೀನಿನ ಮಾತುಕತೆ ನಡೆಸುತ್ತಿರುವಾಗ, ಕೋಪಗೊಂಡ ಐತಪ್ಪ ನಾಯ್ಕ, ತಮ್ಮನ ಮೇಲೆ ಮರದ ನೊಗದಿಂದ ಹಲ್ಲೆ ನಡೆಸಿದ್ದ. ಪರಿಣಾಮವಾಗಿ ಬಾಳಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು.
ಅಂದಿನ ವಿಟ್ಲ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜ್ ಎಚ್.ಇ. ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಒಟ್ಟು 17 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ಮತ್ತು ಎಫ್‌ಎಸ್‌ಎಲ್ ವರದಿ ನೀಡಿದ್ದ ವೈದ್ಯರ ಸಾಕ್ಷ್ಯ ಮುಖ್ಯವಾಗಿತ್ತು.
ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಹರೀಶ್ಚಂದ್ರ ಉದಿಯಾವರ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.