ADVERTISEMENT

ಆಚಾರ್ಯ ಮಠದ ಶಾರದಾ ಮಹೋತ್ಸವ ಸಂಪನ್ನ

ಶೋಭಾಯಾತ್ರೆಗೆ ರಂಗು ತುಂಬಿದ ಹುಲಿವೇಷ, ಟ್ಯಾಬ್ಲೊ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 5:46 IST
Last Updated 15 ಅಕ್ಟೋಬರ್ 2024, 5:46 IST
ಆಚಾರ್ಯಮಠದಲ್ಲಿ ಪೂಜೆಗೊಂಡ ಶ್ರೀಶಾರದಾಮಾತೆಯ ಶೋಭಾಯಾತ್ರೆಗೂ ಮುನ್ನ ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಮಹಾ ಮಂಗಳಾರತಿಯನ್ನು ಸೋಮವಾರ ನೆರವೇರಿಸಿದರು
ಆಚಾರ್ಯಮಠದಲ್ಲಿ ಪೂಜೆಗೊಂಡ ಶ್ರೀಶಾರದಾಮಾತೆಯ ಶೋಭಾಯಾತ್ರೆಗೂ ಮುನ್ನ ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಮಹಾ ಮಂಗಳಾರತಿಯನ್ನು ಸೋಮವಾರ ನೆರವೇರಿಸಿದರು   

ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದ ಆಚಾರ್ಯ ಮಠ ವಠಾರದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಪೂಜೆಗೊಂಡ ಶ್ರೀಶಾರದಾ ಮಾತೆಯ ಶೋಭಾಯಾತ್ರೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಅ.9 ರಿಂದ ಐದು ದಿನಗಳ ಕಾಲ ಪೂಜೆಗೊಂಡ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಚಿತ್ರಾಪುರ ಮಠ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಚಿತ್ತೈಸಿದ್ದರು. ಶ್ರೀವೆಂಕಟರಮಣ ದೇವಸ್ಠಾನದ ಆಡಳಿತ ಮಂಡಳಿ ಮತ್ತು ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಶ್ರೀಗಳಿಗೆ ದೇವಸ್ಥಾನದಲ್ಲಿ ಭವ್ಯ ಸ್ವಾಗತ ಕೋರಿದರು. ಶ್ರೀ ವೆಂಕಟರಮಣ ದೇವರ ದರ್ಶನದ ಬಳಿಕ ವಸಂತ ಮಂಟಪಕ್ಕೆ ತೆರಳಿದ ಸ್ವಾಮೀಜಿ, ಅಲ್ಲಿ ಪೂರ್ಣಾಲಂಕಾರದಿಂದ ಶೋಭಿಸುತ್ತಿದ್ದ ಶ್ರೀ ಶಾರದಾ ಮಾತೆಗೆ ಮಹಾ ಮಂಗಳಾರತಿ ನೆರವೇರಿಸಿದರು. ಬಳಿಕ ಶಾರದೆಯನ್ನು ಶ್ರೀವೆಂಕಟರಮಣ ದೇವಸ್ಥಾನಕ್ಕೆ ಕರೆತಂದು ದೇವರ ದರ್ಶನ ಮಾಡಿಸಲಾಯಿತು.  ನಂತರ ಶಾರದಾ ಮಾತೆಯ ವಿಸರ್ಜನೆಯ ಶೋಭಾಯಾತ್ರೆ ಆರಂಭವಾಯಿತು. ಶೋಭಾಯಾತ್ರೆಯ ವೈಭವವನ್ನು ಸ್ವಾಮೀಜಿ, ಸರಸ್ವತಿ ಕಲಾಮಂಟಪದಲ್ಲಿ ವೀಕ್ಷಿಸಿದರು. 

ಶೋಭಾಯಾತ್ರೆಯಲ್ಲಿ ಸಾಗಿಬಂದ ಶ್ರೀ ಶಾರದಾ ಮಾತೆಯ ಮನಮೋಹಕ ರೂಪವನ್ನು ಕಣ್ತುಂಬಿಕೊಳ್ಳಲು ಭಕ್ತರು ನಿದ್ದೆ ಬಿಟ್ಟು ಕಾದಿದ್ದರು. 14 ಹುಲಿವೇಷ ತಂಡಗಳು ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ಹುಲಿ ಕುಣಿತ ದ ವೈಭವಕ್ಕೆ ಮನಸೋತ ಭಕ್ತರು ತಾಸೆಯ ಪೆಟ್ಟಿನ ಲಯಕ್ಕೆ ತಾವೂ ಹೆಜ್ಜೆ ಹಾಕಿದರು. ಮನ ಸೆಳೆಯುವ ಟ್ಯಾಬ್ಲೊಗಳು ಶೋಭಾಯಾತ್ರೆಗೆ ಮೆರುಗು ತುಂಬಿದವು.

ADVERTISEMENT

ಉತ್ಸವ ಸ್ಥಾನದಿಂದ ಹೊರಟ ಮರವಣಿಗೆ ಶ್ರೀಮಹಾಮಾಯ ದೇವಾಲಯ–  ಕೆನರಾ ಪ್ರೌಢಶಾಲೆಯ ಹಿಂಭಾಗದ ಮಾರ್ಗವಾಗಿ ರಾಷ್ಟ್ರಕವಿ ಗೋವಿಂದ ಪೈ ವೃತ್ತವನ್ನು ತಲುಪಿತು. ಅಲ್ಲಿಂದ ಡೊಂಗರಕೇರಿ ಮಾರ್ಗವಾಗಿ ನ್ಯೂಚಿತ್ರಾ – ಬಸವನಗುಡಿ–ಚಾಮರಗಲ್ಲಿ  ಮಾರ್ಗವಾಗಿ ರಥ ಬೀದಿಗೆ ಮರಳಲಿದೆ. ಶ್ರೀಮಹಾಮಾಯಿ ತೀರ್ಥದಲ್ಲಿ ಶಾರದಾ ಮಾತೆಯ ವಿಗ್ರಹದ ಜಲಸ್ತಂಬನಗೊಳಿಸಲಾಗುತ್ತದೆ. 

ಶೋಭಾಯಾತ್ರೆಯಲ್ಲಿ ಸಾಗಿಬಂದ ಶಾರದೆಯ ಮನಮೋಹಕ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಮಾರ್ಗದುದ್ದಕ್ಕೂ ಭಾರಿ
ಶ್ರೀ ಶಾರದೋತ್ಸವ  ಸಮಿತಿಯ ಅಧ್ಯಕ್ಷ  ಡಾ.ಉಮಾನಂದ ಮಲ್ಯ , ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ, ಜೋಡುಮಠ ಭಾಸ್ಕರ್ ಭಟ್, ದತ್ತಾತ್ರೆಯ ಭಟ್ , ಗಣೇಶ್ ಬಾಳಿಗಾ , ಸುರೇಶ ಕಾಮತ್ , ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ್ ಕಾಮತ್, ಬಿಜಪಿ ಯುವಮೋರ್ಚಾದ ದಕ್ಷಿಣ ಕನ್ನಡ ಜಿಲ್ಲ ಘಟಕದ ಅಧ್ಯಕ್ಷ ನಂದನ್ ಮಲ್ಯ , ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್  ಮೊದಲಾದ ಗಣ್ಯರು ಪಾಲ್ಗೊಂಡರು.

ಗೊಲ್ಲರಕೇರಿ ಶಾರದೋತ್ಸವ

ಶೋಭಾಯಾತ್ರೆ ನಗರದ ಗೊಲ್ಲರಕೇರಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ  ವತಿಯಿಂದ ಗೊಲ್ಲರಕೇರಿಯ ಶ್ರೀ ವೀರ ಹನುಮಂತ ದೇವಾಸ್ಥಾನದಲ್ಲಿ ಪೂಜೆಗೊಂಡ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೊಭಾಯಾತ್ರೆ ಭಾನುವಾರ ನೆರವೇರಿತು. ಶೋಭಾಯಾತ್ರೆಯಲ್ಲಿ ಸಾಗಿಬಂದ ಸರ್ವಾಲಂಕೃತ ಶಾರದಾ ಮಾತೆಯ ಸೊಬಗನ್ನು ಭಕ್ತರು ಕಣ್ತುಂಬಿಕೊಂಡರು.  ಶ್ರೀಶಾರದಾ ಮಾತೆಯ ವಿಗ್ರಹವನ್ನು ಶ್ರೀ ಮಹಾಮಾಯ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.