ಕಡಬ (ಉಪ್ಪಿನಂಗಡಿ): ತಾಲ್ಲೂಕು ಕೇಂದ್ರವಾಗಿರುವ ಕಡಬದಲ್ಲಿ ನ್ಯಾಯಾಲಯ ನಿರ್ಮಿಸಲು ಮೀಸಲಿಟ್ಟ ಜಾಗವನ್ನು ಹಾಗೂ ತಾತ್ಕಾಲಿಕವಾಗಿ ನ್ಯಾಯಾಲಯ ಕಟ್ಟಡವನ್ನು ಗುರುವಾರ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪಾಟೀಲ್ ಪರಿಶೀಲನೆ ನಡೆಸಿದರು.
ನ್ಯಾಯಾಲಯಕ್ಕಾಗಿ ಕಡಬ ಮಿನಿ ವಿಧಾನಸೌಧದ ಹಿಂಭಾಗ ಕಾದಿರಿಸಲಾದ 3 ಎಕರೆ ಜಾಗದ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ಆ ಜಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಗ್ಗೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಿದರು.
ಕಡಬದ ವಕೀಲರು ಹಾಗೂ ಪ್ರಮುಖರು ಮಾತನಾಡಿ, 42 ಗ್ರಾಮಗಳನ್ನೊಳಗೊಂಡ ವಿಸ್ತಾರವಾದ ಕಡಬ ತಾಲ್ಲೂಕಿನಲ್ಲಿ ಜನಸಂಖ್ಯೆ ಅಧಿಕವಾಗಿದೆ. ಇದು ತಾಲ್ಲೂಕು ಆದರೂ ಇಲ್ಲಿನ ಜನರಿಗೆ ಪುತ್ತೂರು ನ್ಯಾಯಾಲಯವನ್ನೇ ಇನ್ನೂ ಆಶ್ರಯಿಸಬೇಕಾಗಿದೆ. ಕಡಬ ತಾಲ್ಲೂಕು ವ್ಯಾಪ್ತಿಯಿಂದ ಸುಮಾರು 60 ಕಿಲೋ ಮೀಟರ್ ದೂರದ ಪುತ್ತೂರಿಗೆ ನ್ಯಾಯಾಲಯಕ್ಕಾಗಿ ಹೋಗುತ್ತಿರುವುದು ತಪ್ಪ ಬೇಕಾದರೆ ಶೀಘ್ರದಲ್ಲೇ ಕಡಬದಲ್ಲಿ ನ್ಯಾಯಾಲಯ ಪ್ರಾರಂಭಿಸಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.
ಬಳಿಕ ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ಮಿನಿ ವಿಧಾನ ಸೌಧದ ಬಳಿಯಿರುವ ಎಪಿಎಂಸಿ ಕಟ್ಟಡದ ಮಹಡಿಯ ಹಾಲ್ ಅನ್ನು ಪರಿಶೀಲನೆ ಮಾಡಿದರು.
ಬಳಿಕ ಮಾತನಾಡಿದ ನ್ಯಾಯಾಧೀಶರು, ನ್ಯಾಯಾಲಯ ಪ್ರಾರಂಭಕ್ಕೆ ಹಂತ ಹಂತವಾಗಿ ಕ್ರಮಗಳು ಆಗಬೇಕಾಗಿದೆ. ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸುವ ಬಗ್ಗೆ ರಾಜ್ಯ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು. ಶೀಘ್ರದಲ್ಲಿ ನ್ಯಾಯಾಲಯ ಪ್ರಾರಂಭಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ್‌ಗಳಾದ ಸಾಯುದುಲ್ಲಾ ಖಾನ್, ಗೋಪಾಲ್ ಕೆ ಅವರು ನ್ಯಾಯಾಧೀಶರಿಗೆ ಅಗತ್ಯ ಪೂರಕ ಮಾಹಿತಿ ನೀಡಿದರು.
ವಕೀಲರಾದ ಲೋಕೇಶ್ ಎಂ.ಜೆ.ಕೊಣಾಜೆ, ಶಿವಪ್ರಸಾದ್ ಪುತ್ತಿಲ, ಕೃಷ್ಣಪ್ಪ ಗೌಡ ಕಕ್ವೆ, ನಾರಾಯಣ ಗೌಡ, ಪೃಥ್ವಿ, ಜ್ಞಾನೇಶ ಬಾಬು, ಚೇತನಾ, ಸುಮನಾ ಎಮ್., ಮಹಮ್ಮದ್ ರಮೀಝ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.