ಕ್ಸೇವಿಯರ್ ಮಂಡಳಿಯ 2025ನೇ ಸಾಲಿನ ಸ್ಮರಣ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಬೈಜು ಆಂಟೊನಿ, ವಿಲಿಯಂ ಬ್ಲಾಂಟನ್ ಫೀಸ್ಟರ್, ಫಾ.ಪ್ರವೀಣ್ ಮಾರ್ಟಿಸ್, ಆರ್ಮ್‌ಸ್ಟ್ರಾಂಗ್ ಪಾಮೆ, ಜೋಜಿ ರೆಡ್ಡಿ, ಎಲಿಯಾಸ್ ಗೋನ್ಸಾಲ್ವಿಸ್, ಡಾ.ಎಂ.ಸಿ.ಸುಧಾಕರ್, ದೀಪ್ತಿ ಭಾಗವಹಿಸಿದ್ದರು
ಮಂಗಳೂರು: ತಾಂತ್ರಿಕ ಹಾಗೂ ಉನ್ನತ ಶಿಕ್ಷಣವನ್ನು ಮೇಲ್ದರ್ಜೆಗೇರಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಸರ್ಕಾರಕ್ಕೆ ₹ 2500 ಕೋಟಿ ನೆರವು ನೀಡಲಿದೆ. 40 ಪ್ರಥಮ ದರ್ಜೆ ಕಾಲೇಜು, 10 ಪಾಲಿಟೆಕ್ನಿಕ್ ಮೇಲ್ದರ್ಜೆಗೇರಿಸಲು ಹಾಗೂ 9 ಉತ್ಕೃಷ್ಟತಾ ಕೇಂದ್ರ (ಸೆಂಟರ್ ಆಫ್ ಎಕ್ಸೆಲೆನ್ಸ್) ಗಳನ್ನು 4 ವರ್ಷಗಳಲ್ಲಿ ಸ್ಥಾಪಿಸಲು ನೆರವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಇಲ್ಲಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಹಾಗೂ ಕ್ಸೇವಿಯರ್ ಉನ್ನತ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಮಂಡಳಿಯ 25ನೇ ತ್ರೈ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
‘ಉನ್ನತ ಶಿಕ್ಷಣದಲ್ಲಿ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದೇವೆ. ಪ್ರತಿಯೊಂದು ಕೋರ್ಸ್ ಕೂಡಾ ಉದ್ಯೋಗಾವಕಾಶಕ್ಕೆ ಪೂರಕವಾಗಿರುವುದನ್ನು ಖಾತರಿಪಡಿಸಲಿದ್ದೇವೆ. ಈ ಸಲುವಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಕ್ರಿಯಾತ್ಮಕ ಪಠ್ಯಕ್ರಮ ಹಾಗೂ ಉತ್ತಮ ಸೌಕರ್ಯಗಳನ್ನು ಅಳವಡಿಸಿಕೊಳ್ಳಲಿವೆ. ವಿದ್ಯಾರ್ಥಿಗಳು ಸಂವಹನ ಕೌಶಲ, ಸಮಸ್ಯೆ ಬಗೆಹರಿಸುವಿಕೆ ಮತ್ತು ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಹಾಗೂ ಅವರ ಸಾಮರ್ಥ್ಯವೃದ್ಧಿಗೆ ಇದು ನೆರವಾಗಲಿದೆ’ ಎಂದರು.
ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್ಮ್‌ಸ್ಟ್ರಾಂಗ್ ಪಾಮೆ, ‘ಕೇಂದ್ರ ಸರ್ಕಾರವು ಉನ್ನತ ಶಿಕ್ಷಣದ ಸುಧಾರಣೆಗಾಗಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸ) ಅಡಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಇದರಲ್ಲಿ ಲಭ್ಯ ಇರುವ ಅನುದಾನವನ್ನು ಶಿಕ್ಷಣ ಸಂಸ್ಥೆಗಳು ಬಳಸಿಕೊಳ್ಳಬೇಕು. ಈ ವರ್ಷದ ಬಜೆಟ್‌ನಲ್ಲಿ ಒದಗಿಸಿದ ಅನುದಾನದಲ್ಲಿ ₹ 250 ಕೋಟಿಗಳಷ್ಟು ಮೊತ್ತ ಈಗಲೂ ಲಭ್ಯ ಇದೆ’ ಎಂದರು.
ಕ್ಸೇವಿಯರ್ ಮಂಡಳಿಯ ಅಧ್ಯಕ್ಷ ಜೋಜಿ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಾಗಪುರದ ಆರ್ಚ್ ಬಿಷಪ್ ರೆ.ಎಲಿಯಾಸ್ ಗೋನ್ಸಾಲ್ವಿಸ್ ಶುಭಸಂದೇಶ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಸಿಂಥಿಯಾ ಮೆನೆಜಸ್ ದಿಕ್ಸೂಚಿ ಭಾಷಣ ಮಾಡಿದರು.
ಅಮೆರಿಕದ ಡಲ್ಲಾಸ್ ಬ್ಯಾಪ್ಟಿಸ್ಟ್ ವಿಶ್ವವಿದ್ಯಾಲಯದ ವಿಲಿಯಂ ಬ್ಲಾಂಟನ್ ಫೀಸ್ಟರ್, ಎಐಸಿಸಿಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಅನಿಲ್ ಥಾಮಸ್, ಕ್ಸೇವಿಯರ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಭಗಿನಿ ದೀಪ್ತಿ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಫಾ ಪ್ರವೀಣ್ ಮಾರ್ಟಿಸ್ ಭಾಗವಹಿಸಿದ್ದರು. ಕ್ಸೇವಿಯರ್ ಮಂಡಳಿಯ ಕರ್ನಾಟಕ ಘಟಕದ ಪ್ರಾದೇಶಿಕ ಅಧ್ಯಕ್ಷ ಫಾ.ಬೈಜು ಆಂಟೊನಿ ಸ್ವಾಗತಿಸಿದರು. ಮಂಡಳಿಯ ಉಪಾಧ್ಯಕ್ಷ ಫಾ.ಗಿಲ್ಬರ್ಟ್ ಮಸ್ಕರೇನ್ಹಸ್ ಧನ್ಯವಾದ ಸಲ್ಲಿಸಿದರು.
ಉನ್ನತ ಶಿಕ್ಷಣಕ್ಕೆ ಕ್ರಿಯಾತ್ಮಕ ಪಠ್ಯಕ್ರಮ, ಉತ್ತಮ ಸೌಕರ್ಯ: ಸಚಿವ 40 ಪ್ರಥಮ ದರ್ಜೆ ಕಾಲೇಜು, 10 ಪಾಲಿಟೆಕ್ನಿಕ್ ಮೇಲ್ದರ್ಜೆಗೆ 4 ವರ್ಷಗಳಲ್ಲಿ 9 ಉತ್ಕೃಷ್ಟತಾ ಕೇಂದ್ರ ಸ್ಥಾಪನೆ
‘ವಿದೇಶಿ ವಿವಿಗಳಿಂದ ಶಿಕ್ಷಣದಲ್ಲಿ ಪರಿವರ್ತನೆ’
‘ವಿದೇಶಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲೂ ತಮ್ಮ ಕೇಂದ್ರಗಳನ್ನು ಆರಂಭಿಸುವುದರಿಂದ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಪರಿವರ್ತನೆಗಳಾಗಲಿವೆ. ಇಲ್ಲಿನ ಖಾಸಗಿ ವಿಶ್ವವಿದ್ಯಾಲಯಗಳೂ ಜಾಗತಿಕ ದರ್ಜೆಯ ಕೋರ್ಸ್‌ಗಳನ್ನು ಪರಿಚಯಿಸಬೇಕಾಗುತ್ತದೆ. ಪಠ್ಯಕ್ರಮ ಕಲಿಕಾ ಕ್ರಮಗಳ ಸುಧಾರಣೆ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ’ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು. ‘ರಾಜ್ಯದಲ್ಲಿ ಲಂಕಾಸ್ಟರ್ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. ಲಿವರ್‌ಪೂಲ್ ವಿಶ್ವವಿದ್ಯಾಲಯ ಈಗಾಗಲೇ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜು ಇಲ್ಲಿ ಸಂಶೋಧನಾ ಕೇಂದ್ರವನ್ನು ಆರಂಭಿಸಿದೆ. ಇನ್ನಷ್ಟು ವಿದೇಶಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮ ಸಂಸ್ಥೆಗಳನ್ನು ಆರಂಭಿಸಲಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.