ADVERTISEMENT

ಮಂಗಳೂರು: ವಿಮಾನ ದುರಂತಕ್ಕೆ 15 ವರ್ಷ‌: ಮೃತರಿಗೆ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 8:04 IST
Last Updated 22 ಮೇ 2025, 8:04 IST
   

ಮಂಗಳೂರು: ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದ ಕೆಂಜಾರಿನಲ್ಲಿ 2010ರ ಮೇ 22ರಂದು ಸಂಭವಿಸಿದ ವಿಮಾನ ದುರಂತಕ್ಕೆ ಗುರುವಾರ 15 ವರ್ಷ ತುಂಬಿದೆ. ದುರಂತದಲ್ಲಿ ಮೃತಪಟ್ಟವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೂಳೂರಿನ ತಣ್ಣೀರುಬಾವಿ ರಸ್ತೆ ಪಕ್ಕದಲ್ಲಿರುವ ಈ ದುರಂತದ ಸ್ಮಾರಕದಲ್ಲಿ ದಕ್ಷಿಣ ಕನ್ನಡದ ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಹೂಗಳನ್ನು ಅರ್ಪಿಸಿ, ಮೌನ ಪ್ರಾರ್ಥನೆ ಸಲ್ಲಿಸಿದರು.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಶುಪಾಲನಾ ಮತ್ತು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಶೆಟ್ಟಿ, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಭಾಗವಹಿಸಿದ್ದರು.

ADVERTISEMENT

ದುಬೈನಿಂದ ಬಂದಿದ್ದ ಐಎಕ್ಸ್‌ 812 ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು 2010ರ ಮೇ 22ರಂದು ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಇಳಿಯುವ ವೇಳೆ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿದ್ದ 166 ಪ್ರಯಾಣಿಕರಲ್ಲಿ 158 ಮಂದಿ ಮೃತಪಟ್ಟಿದ್ದರು. 8 ಪ್ರಯಾಣಿಕರು ಮಾತ್ರ ಬದುಕುಳಿದಿದ್ದರು.

ದುರಂತದಲ್ಲಿ ಮೃತಪಟ್ಟವರಲ್ಲಿ 12 ಮಂದಿಯ ಮೃತದೇಹಗಳ ಗುರುತು ಪತ್ತೆಯಾಗಿರಲಿಲ್ಲ. ಆ ಮೃತದೇಹಗಳನ್ನು ಕೂಳೂರು ಬಳಿ ತಣ್ಣೀರುಬಾವಿ ರಸ್ತೆ ಪಕ್ಕದಲ್ಲಿ ಹೂಳುವ ಮೂಲಕ ಜಿಲ್ಲಾಡಳಿತವೇ ಅಂತ್ಯಸಂಸ್ಕಾರ ನಡೆಸಿತ್ತು. ಈ ಸ್ಥಳದ ಸಮೀಪದಲ್ಲಿ ಪುಟ್ಟ ಉದ್ಯಾನ ನಿರ್ಮಿಸಿ, ಅದರಲ್ಲಿ ವಿಮಾನ ದುರಂತದ ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು.

‘ಜಿಲ್ಲೆಯಲ್ಲಿ ಸಂಭವಿಸಿರುವ ಅತಿದೊಡ್ಡ ದುರಂತವಿದು. ಇದರಲ್ಲಿ ಮರಣ ಹೊಂದಿದವರ ಕುಟುಂಬದವರಿಗೆ ಆತ್ಮವಿಶ್ವಾಸ ತುಂಬುವ ಸಲುವಾಗಿ ಜಿಲ್ಲಾಡಳಿತವು ಪ್ರತಿ ವರ್ಷವೂ ಮೇ 22ರಂದು ಈ ಶದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ’ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ ಕೆ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.